ಕಾಸರಗೋಡು: ರಾಜ್ಯ ಮಟ್ಟದಲ್ಲಿ ಲಾಕ್ ಡೌನ್ ನಲ್ಲಿ ಕೊಂಚ ಸಡಿಲಿಕೆ ಜಾರಿಗೊಳಿಸುತ್ತಿರುವ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಲಾಕ್ ಡೌನ್ ಇರುವುದಿಲ್ಲ. ಬದಲಾಗಿ ವಾರ್ಡ್ ಮಟ್ಟದಲ್ಲಿ ನಿಯಂತ್ರಣ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಗಿಗಳ ಮಟ್ಟದ ಗಣನೆಯ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದ ಲಾಕ್ ಡೌನ್ ಇರುವುದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಾರ್ಡ್ ಮಟ್ಟದ ರೋಗ ಖಚಿತತೆ ಗಣನೆ ಪ್ರತಿನಿತ್ಯ ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರಕ್ಕೆ ಹಸ್ತಾಂತರಿಸಲಿದೆ. ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ರೋಗ ಗಣನೆಯನ್ನು ಪ್ರತಿ ಮಂಗಳವಾರ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಬುಧವಾರದ ಕೊರೋನಾ ಕೋರ್ ಸಮಿತಿ ಸಭೆಗಳಲ್ಲಿ ಈ ಗಣನೆಗಳ ಹಿನ್ನೆಲೆಯಲ್ಲಿ ಏರ್ಪಡಿಸಲಾಗುವ ನಿತಯಂತ್ರಣಗಳ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ, ಹೆಚ್ಚುವರಿ ದಂಡನಧಿಕಾರಿ ಈ ಬಗ್ಗೆ ಅಗತ್ಯದ ಕ್ರಮ ಕೈಗೊಳ್ಳುವರು.
ಜಿಲ್ಲೆಯಲ್ಲಿ ಅತ್ಯಧಿಕ ರೋಗಿಗಳಿರುವ ಪ್ರದೇಶಗಳನ್ನು ಪತ್ತೆ ಮಾಡಿ ಆಯಾ ವಲಯಗಳಲ್ಲಿ ಮಾತ್ರ ನಿಗದಿಪಡಿಸುವ ಉದ್ದೇಶವಿರುವ ಸ್ಟ್ರೇಟೆಡ್ ಮಲ್ಟಿ ಸ್ಟೇಜ್ ರಾಂಡಂ ಸಾಂಪ್ಲಿಂಗ್ ತಪಾಸಣೆ ಕ್ರಮದಲ್ಲೂ ಬದಲಾವಣೆ ತರಲಾಗುವುದು. ವಾರ್ಡೊಂದರಲ್ಲಿ ತಲಾ 40 ಮಂದಿಯಂತೆ ಪ್ರತಿದಿನ 55 ವಾರ್ಡ್ ಗಲಲ್ಲಿ ತಪಾಸಣೆ ನಡೆಸಲಾಗುವುದು. 7 ದಿನಗಳ ನಂತರ ತಪಾಸಣೆ ಪುನರಾವರ್ತಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ 8 ಆರೋಗ್ಯ ಬ್ಲೋಕ್ ಗಳಲ್ಲಿ 777 ವಾರ್ಡ್ ಗಳಿವೆ. ದಿನವೊಂದಕ್ಕೆ 55 ವಾರ್ಡ್ ಗಳಲ್ಲಿ 2200 ಮಂದಿಗೆ ಕೋವಿಡ್ ತಪಾಸಣೆ ನಡೆಸಲಾಗುವುದು. ಆಟೋರಿಕ್ಷಾ ಚಾಲಕರು, ಬಸ್ ಸಿಬ್ಬಂದಿ, ಅಂಗಡಿ ಮಾಲೀಕರು, ಅಂಗಡಿಗಳ, ಕಾರ್ಖಾನೆಗಳ, ಉದ್ದಿಮೆ- ವ್ಯಾಪಾರ ಸಂಸ್ಥೆಗಳ ಸಿಬ್ಬಂದಿ ಸಹಿತ ಸಾರ್ವಜನಿಕರೊಂದಿಗೆ ಸತತ ಸಂಪರ್ಕ ಹೊಂದುವ, ಕಚೇರಿಗಳ ಸಿಬ್ಬಂದಿಯ ತಪಾಸಣೆ ನಡೆಸಲಾಗುವುದು.
ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳ ವಾಕ್ಸಿನೇಷನ್ ತುರ್ತಾಗಿ ನಡೆಸಲು ಸಂಬಂಧ ಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿಗೆ ಹೊಣೆ ನೀಡಲಾಗಿದೆ. ಕಾಲನಿಗಳಲ್ಲಿ ತುಳು ಭಾಷೆಯಲ್ಲೂ ಜಾಗೃತಿ ನಡೆಸಲಾಗುವುದು.
ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆನ್ ಲೈನ್ ಮೂಲಕದ ಕಲಿಕೆಗೆ ನೆಟ್ ವರ್ಕ್ ಸಮಸ್ಯೆಗಳಿದ್ದು, ತಕ್ಷಣ ಪರಿಹಾರ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಟೆಲಿಕಾಂ ಸಮಿತಿ ಪ್ರತಿ ಗುರುವಾರ ಸಭೆ ಸೇರಲಿದೆ. ಯಾವೆಲ್ಲ ವಲಯಗಳಲ್ಲಿ ರೇಂಜ್ ಸಮಸ್ಯೆಗಳಿವೆ ಎಂದು ಪತ್ತೆ ಮಾಡಿ ಪರಿಹಾರ ಕೈಗೊಳ್ಳಲಾಗುವುದು.
ಕಲಿಕೆ ಪೂರ್ಣರೂಪದಲ್ಲಿ ಆನ್ ಲೈನ್ ಮೂಲಕವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಇಲ್ಲದೇ ಇರುವ ಮಕ್ಕಳಿಗೆ ತೊಡಕಾಗುತ್ತಿದೆ. ಅಂತಹ ಮಕ್ಕಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಾಲೆಂಜ್ ಕಾರ್ಯಕ್ರಮಗಳನ್ನು ನಡೆಸುವ ವೇಳೆ ಮಕ್ಕಳನ್ನು ಪ್ರದರ್ಶನ ವಸ್ತುವಾಗಿಸಕೂಡದು. ಯಾವ ಮಗುವಿಕೆ ಕಲಿಕೋಪಕರಣ ನೀಡಲಾಗುವುದೋ, ಆ ಶಾಲೆಯ ಅಧಿಕಾರಿಗಳು ಯಾ ರಕ್ಷಕ-ಶಿಕ್ಷಕ ಸಂಘಕ್ಕೆ ಮಾಹಿತಿ ನೀಡಿ ಮಾತ್ರ ಇಂಥಾ ಕಾರ್ಯಕ್ರಮ ನಡೆಸಬೇಕು. ಇದೇ ವೇಳೆ ಇಂಥಾ ಕಾರ್ಯಕ್ರಮಗಳಲ್ಲಿ ಜನ ಸಂದಣಿಕೂಡದು. ಸರಕಾರಿ ಕಾರ್ಯಕ್ರಮಗಳ ಸಹಿತ ಎಲ್ಲ ಸಮಾರಂಭಗಳೂ ಡಿಜಿಟಲ್ ಮೂಲಕ ಮಾತ್ರ ನಡೆಸಬೇಕು ಎಂದು ಸಭೆ ಆದೇಶಿಸಿದೆ.
"ಕೋವಿಡ್ ನ ಇನ್ನೊಂದು ಅಲೆ ಬೇಡ" ಎಂಬ ಸಂದೇಶದೊಂದಿಗೆ ನಡೆಯುವ ಜಿಲ್ಲಾ ಮಟ್ಟದ ಜಾಗೃತಿ ಅಭಿಯಾನವನ್ನು ಸರಕಾರಿ ಸಿಬ್ಬಂದಿ ವಹಿಸಿಕೊಂಡು ಮಾದರಿಯಾಗಬೇಕು. ಜತೆಗೂಡಿ ಆಹಾರ ಸೇವನೆ ನಡೆಸುವುದಿಲ್ಲ ಎಂದು ಖಚಿತತೆ ಮೂಡಿಸಬೇಕು. ಮಾಸ್ಟರ್ ಯೋಜನೆಯನ್ನು ಮುಂದುವರಿಸಲೂ ಸಭೆ ನಿರ್ಧರಿಸಿದೆ. ಇದಕ್ಕಿರುವ ಸೌಕರ್ಯಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳು ಒದಗಿಸಬೇಕು. ಇತರ ರಾಜ್ಯಗಳ ಕಾರ್ಮಿಕರಿಗೆ ವಾಕ್ಸಿನೇಷನ್ ಖಾಸಗಿ ಆಸ್ಪತ್ರೆಗಳಲ್ಲೂ ನಡೆಸಬಹುದಾಗಿದೆ. ಇತರ ರಾಜ್ಯಗಳ ಕಾರ್ಮಿಕರಿಗೆ ಮತ್ತು ಮೀನುಗಾರರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಚುರುಕಿನೊಂದಿಗೆ ಮುಂದುವರಿಯುತ್ತಿದೆ. ಇದನ್ನು ತ್ವರಿಗತಿಯಿಂದ ಪೂರ್ಣಗೊಳಿಸಬೇಕು ಎಂದು ಸಭೆ ಆದೇಶ ನೀಡಿದೆ.
ಜಿಲ್ಲೆಯಲ್ಲಿ ಆಕ್ಸಿಜನ್ ಕ್ಷಾಮ ತಲೆದೋರದಂತೆ ಚಟ್ಟಂಚಾಲ್ ನಲ್ಲಿ ಸಾರ್ವಜನಿಕ ವಲಯದಲ್ಲಿ ಸ್ಥಾಪಿಸಲಾಗುವ ಪ್ಲಾಂಟ್ ನ ನಿರ್ಮಾಣ ನಿಗದಿತ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಅನಂತಪುರದಲ್ಲಿ ಖಾಸಗಿ ವಲಯದಲ್ಲಿ ದ್ರವೀಕೃತ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲೂ ಕ್ರಮ ಕೈಗೊಳ್ಳಲಾಗುವುದು. ಉಭಯ ಪ್ಲಾಂಟ್ ಗಳೂ ನಿಗದಿತ ಸಮಯದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.
ಸಹಾಯಗಳು ಜಾಗೃತಿ ಸಮಿತಿಗಳ ಮುಖಾಂತರ ಮಾತ್ರ:
ಕೋವಿಡ್ ಬಾಧಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳ ಕಿಟ್ ಇತ್ಯಾದಿ ಸಹಾಯಗಳನ್ನು ವಿತರಿಸುವವರು ಸ್ಥಳೀಯ ಜಾಗೃತಿ ಸಮಿತಿಗಳ ಮುಖಾಂತರ ಮಾತ್ರ ಈ ಕಾರ್ಯಗಳನ್ನು ನಡೆಸಬೇಕು ಎಂದು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ಆದೇಶಿಸಿದೆ. ಕಾಲನಿಗಳ ಸಹಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಹಾಯ ವಿತರಣೆ ಕಡ್ಡಾಯವಾಗಿ ಕಟ್ಟುನಿಟ್ಟುಗಳೊಂದಿಗೆ ನಡೆಯಬೇಕು. ವ್ಯಕ್ತಿಗಳು, ಸಂಘಟನೆಗಳು ತಮ್ಮಷ್ಟಕ್ಕೆ ಸಹಾಯ ವಿತರಣೆ ನಡೆಸಕೂಡದು ಎಂದು ಸಭೆ ತಿಳಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್, ಜಿಲ್ಲಾ ವೈದ್ಯಧಿಕಾರಿ (ಆರೋಗ್ಯ) ಡಾ.ಕೆ.ಆರ್.ರಾಜನ್, ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ನಿಬಂಧನೆಗಳು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಾತ್ರ:
ಪರೀಕ್ಷಾ ಸಕಾರಾತ್ಮಕ ದರ (ಟಿಪಿಆರ್) ಆಧಾರದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸರಾಸರಿ 7 ದಿನಗಳ ಟೆಸ್ಟ್ ಪಾಸಿಟಿವಿಟಿ ದರವು 8 ಶೇ ವರೆಗೆ ಇದ್ದರೆ, ಅದನ್ನು 'ಕಡಿಮೆ ಹರಡುವಿಕೆ' ಎಂದು ಪರಿಗಣಿಸಲಾಗುತ್ತದೆ. ಶೇಕಡಾ 8 ರಿಂದ 20 ರಷ್ಟು ಇದ್ದರೆ ಮಧ್ಯಮ ಹರಡುವ ಪ್ರದೇಶವೆಂದು ಪರಿಗಣಿಸಲಾಗಿದೆ. ಇದು ಶೇಕಡಾ 20 ಕ್ಕಿಂತ ಹೆಚ್ಚಿದ್ದರೆ, ಅದನ್ನು ವಿಸ್ತರಣಾ ಪ್ರದೇಶವೆಂದು ಪರಿಗಣಿಸಲಾಗುತ್ತದೆ ಮತ್ತು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಶೇಕಡಾ 30 ಕ್ಕಿಂತ ಹೆಚ್ಚು ಟೆಸ್ಟ್ ಪಾಸಿಟಿವಿಟಿ ಇರುವಲ್ಲಿ ಲಾಕ್ ಡೌನ್ ನಿಯಂತ್ರಣಗಳಿರುತ್ತವೆ. ವಿವಾಹ ಮತ್ತು ಮರಣೋತ್ತರ ಸಮಾರಂಭಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಇತರ ಜನಸಂದಣಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಮತಿಸಲಾಗುವುದಿಲ್ಲ. ಎಲ್ಲಾ ಅಗತ್ಯ ಸೇವಾ ಕೇಂದ್ರಗಳನ್ನು ತೆರೆಯಬಹುದು:
ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಚಟುವಟಿಕೆಗಳ ವ್ಯಾಪಾರ ಕೇಂದ್ರ ಸಹಿತ ಇತರ ವ್ಯವಸ್ಥೆಗಳನ್ನು ಎಲ್ಲಾ ಗ್ರಾ.ಪಂ. ವ್ಯಾಪ್ತಿಗಳಲ್ಲೂ ಅನುಮತಿಸಲಾಗುವುದು. ಈ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ತುರ್ತು ಅಗತ್ಯದ ಮಳಿಗೆಗಳು ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ಅಕ್ಷಯ ಕೇಂದ್ರಗಳು ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತವೆ.
ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ಡೌನ್:
ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯದಾದ್ಯಂತ ಮುಂದಿನ ಆದೇಶ ಬರುವವರೆಗೂ ಪೂರ್ಣ ಲಾಕ್ಡೌನ್ ಇರುತ್ತದೆ. ಜೂನ್ 17 ರಿಂದ ಕೇಂದ್ರ ಮತ್ತು ರಾಜ್ಯ ಸಕರ್ಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಸಕರ್ಾರಿ ಕಂಪನಿಗಳು, ಆಯೋಗಗಳು, ನಿಗಮಗಳು ಮತ್ತು ಸ್ವಾಯತ್ತ ಸಂಸ್ಥೆಗಳು ದಿನನಿತ್ಯದ ಶೇಕಡಾ 25 ರಷ್ಟು ಸಿಬ್ಬಂದಿಗಳ ಹಾಜರಾತಿಯೊಂದಿಗೆ ಪಾಳಿ ವ್ಯವಸ್ಥೆ(ಶಿಪ್ಟ್) ಆಧಾರದ ಮೇಲೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು. ಸರಕಾರಿ ಸಚಿವಾಲಯಗಳಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿಗಳು ಶಿಫ್ಟ್ ವ್ಯವಸ್ಥೆಯ ಆಧಾರದಲ್ಲಿ ಕಾರ್ಯನಿರ್ವಹಿಸಲಿವೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment