ಉಜಿರೆ: ಲಾಕ್ ಡೌನ್ ನಿಂದ ಹೆಚ್ಚಿನ ಎಲ್ಲಾ ವ್ಯಾಪಾರ-ವಹಿವಾಟು ಉದ್ಯೋಗಗಳಿಗೆ ಬ್ರೇಕ್ ಬಿದ್ದಿದೆ. ಪ್ರತಿದಿನ ಬಿಝಿಯಾಗಿದ್ದ ಮಂದಿಗೆ ಈಗ ದಿನ ಕಳೆಯುವುದು ಕಷ್ಟವಾಗಿದೆ.
ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಾಕ್ ಡೌನ್ ಸಮಯ ತಮ್ಮ ವ್ಯವಹಾರ ಕ್ಷೇತ್ರದಲ್ಲಿ ವಹಿವಾಟು ಇಲ್ಲದೆ ಸಮಯ ಕಳೆಯಲು ಕಷ್ಟಪಡುತ್ತಿದ್ದ ಯುವಕರ ತಂಡವೊಂದು ಹಳ್ಳದ ಹೂಳೆತ್ತುವ ಕೆಲಸ ಮಾಡುತ್ತಿದೆ.
ಉಜಿರೆ ಗ್ರಾಮದ ಪೆರ್ಲಬೈಲು ಎಂಬಲ್ಲಿ ಸಿವಿಲ್ ಎಂಜಿನಿಯರ್, ವಾಹನಗಳ ಶೋರೂಮ್ ಹೊಂದಿರುವ ಬಿಜಿನೆಸ್ ಮ್ಯಾನ್, ಎಲೆಕ್ಟ್ರಿಷಿಯನ್, ಇಬ್ಬರು ಕಾಲೇಜು ಉದ್ಯೋಗಿಗಳ ತಂಡವೊಂದು ತಮ್ಮ ಪರಿಸರದ 2.5 ಕಿಮೀ ಉದ್ದದ ಹಳ್ಳವೊಂದರ ಹೂಳೆತ್ತುವ ಕಾಮಗಾರಿಯನ್ನು ನಡೆಸುತ್ತಿದೆ.
ಹಿರಿಯರ ಸಹಕಾರ:
ಯುವಕರು ಪೇಟೆಗಳಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ನಿರತರಾಗಿದ್ದ ಕಾರಣ ಹೂಳೆತ್ತುವ ಕೆಲಸದಲ್ಲಿ ವಿಶೇಷ ಅನುಭವ ಹೊಂದಿರಲಿಲ್ಲ. ಈ ಕೆಲಸಕ್ಕೆ ಸಹಕಾರ ಮತ್ತು ಮಾರ್ಗದರ್ಶನ ನೀಡಲು ಸಮೀಪದ 63 ಹರೆಯದ ಹಿರಿಯರೊಬ್ಬರನ್ನು ಹಾಗೂ ಪರಿಸರದ ನಾಲ್ವರು ಮಹಿಳೆಯರನ್ನು ಒಗ್ಗೂಡಿಸಿ ಕಾಮಗಾರಿ ಆರಂಭಿಸಿದರು. ಎರಡು ಕಿಮೀಯಷ್ಟು ಹೂಳೆತ್ತುವ ಕೆಲಸ ಪೂರ್ಣಗೊಂಡಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕಾಮಗಾರಿ ಮುಗಿಯಲಿದೆ. ಕಾಮಗಾರಿ ನಡೆಸುವ ಸಮಯದಲ್ಲಿ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸಿ ಕೆಲಸ ಸಾಗುತ್ತಿದೆ.
ನರೇಗಾ ಬಲ:
ಸ್ವಇಚ್ಛೆಯಿಂದ ಇಲ್ಲಿ ಕಾಮಗಾರಿ ನಡೆಯುತ್ತಿರುವ ಕುರಿತು ತಿಳಿದ ಉಜಿರೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ, ಪಿಡಿಒ, ಕಾರ್ಯದರ್ಶಿ ಮೊದಲಾದವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ, ಈ ಜನೋಪಯೋಗಿ ಕೆಲಸದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.ಇವರಿಗೆ ನರೇಗಾ ಯೋಜನೆ ಕುರಿತು ಮಾಹಿತಿ ನೀಡಿ, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ತಾವೇ ಮುಂದೆ ನಿಂತು ಮಾಡಿಕೊಟ್ಟಿದ್ದಾರೆ.
ಸಾರ್ವಜನಿಕ ಉಪಯೋಗದ ಕಾಮಗಾರಿಗೆ ನರೇಗಾ ಬಲವನ್ನು ನೀಡಿರುವುದು ಕೆಲಸ ನಿರ್ವಹಿಸುವ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈ ಕಾಮಗಾರಿಯಲ್ಲಿ ಸಂಜಯ್, ಗೌರವ್, ಧನ್ಯಕುಮಾರ್, ಮೋಹನ್, ನವೀನ್ ಅವರ ಜೊತೆ ಸ್ಥಳೀಯರಾದ ಸಂಜೀವ, ಹೇಮಾ, ಲಲಿತಾ, ತುಳಸಿ ಮೇಘಾ ಕೈ ಜೋಡಿಸಿದ್ದಾರೆ.
ಜನೋಪಯೋಗಿ ಕಾರ್ಯ:
ಈ ಹಳ್ಳದ ಹೂಳು ತೆರವು ಗೊಂಡಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಹಕಾರವಾಗಿದೆ. ತೋಡಿನ ಪರಿಸರದಲ್ಲಿ ಇದ್ದ ತ್ಯಾಜ್ಯ, ಗಿಡ ಗಂಟಿಗಳಿಗೂ ಮುಕ್ತಿ ಸಿಕ್ಕಿದೆ. ಅಲ್ಲದೆ ಪರಿಸರದಲ್ಲಿ ಹಡಿಲು ಬಿದ್ದಿದ್ದ ಗದ್ದೆಗಳಿಗೆ, ನೀರಿನ ಸಮಸ್ಯೆ ಇದ್ದ ಜಮೀನಿಗೂ ಉಪಯೋಗವಾಗಿದೆ. ಈ ಕಾಮಗಾರಿಯು ಪರಿಸರದ ಅಂತರ್ಜಲ ಮಟ್ಟವನ್ನು ಕಾಪಾಡಲು ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ನೀರು ಸರಾಗವಾಗಿ ಹರಿಯುವ ಕಾರಣ ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯೂ ದೂರವಾಗಿದೆ.
*****
"ಉಜಿರೆ ಪಂಚಾಯಿತಿ ವತಿಯಿಂದ ಉತ್ತಮ ಪ್ರೋತ್ಸಾಹ ಸಹಕಾರ ಸಿಕ್ಕಿದ್ದು ಕಾಮಗಾರಿ ವೇಗವಾಗಿ ಸಾಗಲು ಸಾಧ್ಯವಾಯಿತು. ಸರಕಾರದ ನರೇಗಾ ಜಲಶಕ್ತಿ ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಸಮಯ ಕಳೆಯಲು ಆರಂಭಿಸಿದ ಕೆಲಸ ಆದಾಯಕ್ಕೂ ಕಾರಣವಾಗಿದೆ"
-ಸಂಜಯ್, ಪೆರ್ಲಬೈಲು
ತಂಡದ ಸದಸ್ಯ, ಉಜಿರೆ.
*****
ಪೆರ್ಲಬೈಲಿನ ಯುವಕರ ತಂಡ ಸದ್ದಿಲ್ಲದೆ ಮಾದರಿ ಕೆಲಸವನ್ನು ನಿರ್ವಹಿಸಿದೆ. ಸ್ಥಳೀಯ ಹಿರಿಯರು ಕೂಡ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಇವರಿಗೆ ನರೇಗಾದಿಂದ ಬರುವ ಮೊತ್ತವನ್ನು ಪಾವತಿಸಲು ಬೇಕಾದ ಸೂಕ್ತ ವ್ಯವಸ್ಥೆ ಪಂಚಾಯಿತಿ ವತಿಯಿಂದ ಮಾಡಲಾಗಿದೆ"
-ಪ್ರಕಾಶ್ ಶೆಟ್ಟಿ ನೊಚ್ಚ,
ಪಿಡಿಒ, ಉಜಿರೆ ಗ್ರಾ.ಪಂ.
Post a Comment