'ಧರ್ಮದೈವ' ತುಳು ಕಿರುಚಿತ್ರ ಲೋಕಾರ್ಪಣೆ
ಮೂಡಬಿದಿರೆ: "ದೈವಾರಾಧನೆ ತುಳುನಾಡಿನ ಸಂಸ್ಕೃತಿಯ ಬಹು ಮುಖ್ಯ ಭಾಗ ಎಂಬ ಸತ್ಯವನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ, ಅಲ್ಲದೆ ಈ ವಿಚಾರಗಳು ಬರಿ ಮೂಢನಂಬಿಕೆಯಲ್ಲ; ಮೂಲ ನಂಬಿಕೆ. ಇಡೀ ತುಳು ಸಮಾಜವೇ ದೈವಾರಾಧನೆಯ ನಂಬಿಕೆ ಮೇಲೆ ನಿಂತಿದೆ ' ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ .ಎಂ. ಮೋಹನ್ ಆಳ್ವ ಹೇಳಿದರು.
ತುಳುನಾಡಿನ ದೈವಾರಾಧನೆ ಕುರಿತು ಪುತ್ತೂರಿನ ಸೋನು ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ 'ಧರ್ಮದೈವ' ತುಳುನಾಡ ಬೊಲ್ಪು ತುಳು ಕಿರುಚಿತ್ರವನ್ನು ಇಲ್ಲಿನ ಕುವೆಂಪು ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 'ತುಳುವರು ಸತ್ಯ ಚಿತ್ತಗಳಲ್ಲಿ ನಂಬಿಕೆಯುಳ್ಳವರು. ಅವರ ಪ್ರತಿಯೊಂದು ಕೃತಿಯಲ್ಲೂ ಅದು ಹಾಸು ಹೊಕ್ಕಾಗಿದೆ' ಎಂದವರು ನುಡಿದರು.
ಹಲವು ಆಯಾಮ:
'ದೈವಾರಾಧನೆ ತುಳುನಾಡಿನ ಸಂಸ್ಕೃತಿ, ಆಚರಣೆ, ನಂಬಿಕೆಯನ್ನು ಒಳಗೊಂಡ ಒಂದು ಶ್ರೇಷ್ಠ ಪದ್ಧತಿ. ಅದನ್ನು ಉಳಿಸಿಕೊಂಡು ಬಹಳ ಕಲಾತ್ಮಕವಾಗಿ ದೈವದ ಕಾರ್ಣಿಕವನ್ನು ತೋರಿಸುವ 'ಧರ್ಮದೈವ'ಕಿರುಚಿತ್ರ ಹಲವು ಆಯಾಮಗಳಲ್ಲಿ ಗಮನ ಸೆಳೆಯುತ್ತದೆ' ಎಂದು ಕರ್ನಾಟಕ ಜಾನಪದ, ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಚಿತ್ರ ತಂಡದ ಪರವಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಹೇಶ್ ಮೋಟರ್ಸ್ ನ ಎ.ಕೆ.ಜಯರಾಮ ಶೇಖ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಮುಖ್ಯ ಅತಿಥಿಗಳಾಗಿದ್ದರು. ಧರ್ಮದೈವ ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ನಿರ್ಮಾಪಕ ಸುಧಾಕರ್ ಪಡೀಲ್ ವಂದಿಸಿದರು.
ಪ್ರೀಮಿಯರ್ ಶೋ:
ಈ ಸಂದರ್ಭದಲ್ಲಿ ಧರ್ಮದೈವ ಕಿರುಚಿತ್ರದ ಪ್ರೀಮಿಯರ್ ಶೋ ಪ್ರದರ್ಶನಗೊಂಡಿತು. ಕಿರುಚಿತ್ರ ವೀಕ್ಷಿಸಿದ ಡಾ.ಎಮ್. ಮೋಹನ್ ಆಳ್ವ, ಧರ್ಮದೈವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಮಗ್ರ ಚಿತ್ರ ತಂಡದ ಪರವಾಗಿ ಡಾ.ಮೋಹನ್ ಆಳ್ವರನ್ನು ಗೌರವಿಸಲಾಯಿತು.
ಕೋವಿಡ್ ನಿಯಮಾವಳಿಯಂತೆ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ,ನಾಯಕ ನಟ ರಮೇಶ್ ರೈ ಕುಕ್ಕುವಳ್ಳಿ, ಚಿತ್ರದ ಸಂಭಾಷಣೆಕಾರ ಹಮೀದ್ ಪುತ್ತೂರು, ಸಂಕಲನಕಾರ ರಾಧೇಶ್ ರೈ ಮೊಡಪ್ಪಾಡಿ, ಕ್ಯಾಮರಾ ಮ್ಯಾನ್ ಹರೀಶ್ ಪುತ್ತೂರು , ಚಿತ್ರ ತಂಡದ ದೀಕ್ಷಾ ಡಿ. ರೈ, ಧನು ರೈ, ವಸಂತ ಲಕ್ಷ್ಮಿ, ಅಶ್ವಿನಿ ಪೆರುವಾಯಿ, ಕೌಶಿಕ್ ಕುಂಜಾಡಿ, ಅನುಷಾ ಅಲಿಮಾರ್, ಸುಧೀರ್, ಪ್ರವೀಣ್ ಶೆಟ್ಟಿ ಬಜ್ಪೆ, ಮಾಲಾ ಚಿತ್ತರಂಜನ್ ಶೆಟ್ಟಿ, ಮನ್ವಿತ್ ಸಿ, ಶೆಟ್ಟಿ, ಹೇಮಾ ಜಯರಾಮ್ ರೈ ವಕೀಲರಾದ ಶಶಿಧರ್ ಬಿ. ಎನ್. ಉಪಸ್ಥಿತರಿದ್ದರು.
'ಧರ್ಮದೈವ' ಚಿತ್ರ ಶೀಘ್ರದಲ್ಲಿ ಜನರ ಮುಂದೆ ಬರಲಿದೆ ಎಂದು ಕಥೆ, ಚಿತ್ರಕಥೆ ಮತ್ತು ನಿರ್ದೇಶನ ನೀಡಿದ ನಿತಿನ್ ರೈ ಕುಕ್ಕುವಳ್ಳಿ ಪ್ರಕಟಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق