ಸಾಧಿಸುವ ಛಲ ಇದ್ದರೆ ಅಸಾಧ್ಯವಾದದನ್ನು ಸಾಧಿಸಬಹುದು. ಯಾವುದೇ ಕಲಾಸಾಧನೆ ಮಾಡಲು ಹುಮ್ಮಸ್ಸು ಇದ್ದರೆ ಅಲ್ಲಿ ವಯೋಮಿತಿಯು ತಡೆಯಾಗುವುದಿಲ್ಲ.ಕಠಿಣ ಪರಿಶ್ರಮ ಹಾಗೂ ಶ್ರದ್ದೆಯಿದ್ದರೆ ಯಾವುದು ಕೂಡ ಅಸಾಧ್ಯವಲ್ಲ. ಹೀಗೆ ಯಕ್ಷಗಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಶಿಖರ ಏರಿದ ಇವರು ಕಡಬ ತಾಲೂಕಿನ ಅಲಂಕಾರಿನ ಪೆರಾಬೆಯ ಯೋಗೀಶ್ ಹಾಗೂ ಶ್ಯಾಮಲಾ ದಂಪತಿಗಳ ಸುಪುತ್ರಿ ಶ್ರೇಯಾ ಆಚಾರ್ಯ. ಶ್ರೇಯಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆಲಂಕಾರಿನ ಶ್ರೀ ಭಾರತಿ ಶಾಲೆಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಇವರು ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿದ್ಯಾಸಂಸ್ಥೆಯಲ್ಲಿ ಪದವಿ ವ್ಯಾಸಂಗ ನಡೆಸುತ್ತಿದಾರೆ.
ಬಹುಮುಖ ಪ್ರತಿಭೆ ಶ್ರೇಯಾ ಆಚಾರ್ಯ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿನಂತೆ ಇವರು ಪ್ರಾಥಮಿಕ ಹಂತದಿಂದಲೂ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮುಂಚೂಣಿಯಲ್ಲಿದ್ದರು. ಬಾಲ್ಯದಿಂದಲೂ ಯಕ್ಷಗಾನ, ಭರತನಾಟ್ಯ,ಸಂಗೀತ,ಯೋಗ ಭಜನೆ, ಚಿತ್ರಕಲೆ,ಭಾಷಣ, ಏಕಪಾತ್ರಭಿನಯ, ಅಭಿನಯಗೀತೆ, ಮುಂತಾದವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ಕಡೆ ಗುರುತಿಸಿಕೊಂಡರು.ಶಿಕ್ಷಣ ಇಲಾಖೆಯು ನಡೆಸುವ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ವೈಯುಕ್ತಿಕ ಯಕ್ಷಗಾನ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದರು.ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಶ್ರೇಯಾರವರು ಯಕ್ಷಗಾನ ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ಯಕ್ಷಗಾನವನ್ನು 5 ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿದ ಏಕೈಕ ಪ್ರತಿಭೆ ಈಕೆ . ಇವರು ರಂಗಮಂಟಪದಲ್ಲಿ ಬಣ್ಣ ಬಳಿದು ಕುಣಿಯಲು ಸೈ ಹಾಗೂ ಹಾಡಲು ಸೈ ಎಂಬಂತೆ ಕೇವಲ ಯಕ್ಷಗಾನ ವೇಷಧಾರಿ ಮಾತ್ರವಲ್ಲ, ಭಾಗವತಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಕಂಠದ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುವಂತಹ ಭಾಗವತಿಕೆ ಇವರದು. ಇವರು ಯಕ್ಷಗಾನವನ್ನು ಗುರುಗಳಾದ ಲಕ್ಷ್ಮಣ ಆಚಾರ್ಯ ಎಡಮಂಗಲ,ಬಾಲಕೃಷ್ಣ ಉಡ್ಡ0ಗಳ,ಚಂದ್ರಶೇಖರ್ ಸುಳ್ಯಪದವು ಇವರಲ್ಲಿ ಅಭ್ಯಾಸ ಮಾಡಿರುತ್ತಾರೆ. ಸಂಗೀತವನ್ನು ವಿದ್ವಾನ್ ಕಾಂಚನ ಈಶ್ವರ್ ಭಟ್ ಅವರಿಂದಲೂ ಭರತನಾಟ್ಯವನ್ನು ವಿದುಷಿ ಪ್ರಮೀಳಾ ಲೋಕೇಶ್ ಹಾಗೂ ವಿದ್ವಾನ್ ರಾಘವೇಂದ್ರ ಪ್ರಸಾದ್ ಇವರಲ್ಲಿ ಅಭ್ಯಾಸ ಮಾಡಿರುತ್ತಾರೆ. ಇವರು ಭಾಗವತಿಕೆಯನ್ನು ತೆಂಕಬೈಲಿನ ತಿರುಮಲೇಶ್ವರ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿ ಪ್ರಸ್ತುತ ಗೋವಿಂದ ನಾಯಕ್ ಪಾಲೆಚ್ಚಾರ್, ಹರೀಶ್ ಭಟ್ ಬೋಳಂತಿಮೊಗರು ಇವರಲ್ಲಿ ಅಭ್ಯಸಿಸುತ್ತಿದ್ದಾರೆ. ಯಕ್ಷಗಾನದಲ್ಲಿ 500ಕ್ಕೂ ವೇಷ ಧರಿಸಿ ರಂಗ ಪ್ರವೇಶಿಸಿದ ಇವರು ಭಾಗವತಿಕೆಯಲ್ಲಿ 200ಕ್ಕೂ ಹೆಚ್ಚಿನ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ಹಿರಿಮೆ ಇವರದು. ಇವರ ಪ್ರತಿಭೆಯನ್ನು ಗುರುತಿಸಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇವರಿಗೆ ಮೂರು ವರ್ಷಗಳ ಉಚಿತ ಶಿಕ್ಷಣವನ್ನು ನೀಡಿದೆ.
ಇವರ ಸಾಧನೆಗೆ ಸಂದ ಪುರಸ್ಕಾರಗಳು
ಈ ಬೆಳೆಯುತ್ತಿರುವ ಪ್ರತಿಭೆಯ ಸಾಧನೆಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸುದ್ದಿ ಬಿಡುಗಡೆಯವರು ನೀಡುವ 'ಪ್ರತಿಭಾ ದೀಪ'ಪ್ರಶಸ್ತಿ 'ಕಲಾಶ್ರೀ' ಪ್ರಶಸ್ತಿ ಹಾಗೂ ಕಹಳೆ ನ್ಯೂಸ್ ಚಾನೆಲ್ ನವರ 'ಯಕ್ಷ ಕನ್ಯೆ' ಬಿರುದು ಹಾಗೂ ಅನೇಕ ಕಡೆಗಳಲ್ಲಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ 2022 ರಲ್ಲಿ ಮಕ್ಕಳ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದ್ದಾರೆ. ಪ್ರಸ್ತುತ ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಈಕೆ ಮುಂದೆ ಉತ್ತಮ ಉಪನ್ಯಾಸಕಿ ಆಗಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ.ಈಕೆ ಸಾಧನೆ ಇನ್ನಷ್ಟು ಮುಂದುವರೆಯಲಿ ಹಾಗೂ ಈಕೆಯ ಪ್ರತಿಭೆಯನ್ನು ಎಲ್ಲೆಡೆ ಗುರುತಿಸಿ ಗೌರವಿಸುವಂತಾಗಲಿ.
-ಪ್ರಸಾದಿನಿ.ಕೆ ತಿಂಗಳಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment