ಬಂಟ್ವಾಳ :ನಾವು ನಮ್ಮನ್ನು ಬೆಳೆಸಿಕೊಳ್ಳುವ ರೀತಿ-ನೀತಿಗಳಲ್ಲಿ ಬದಲಾವಣೆ ಬೇಕಾಗಿದೆ. ವ್ಯಕ್ತಿಗೆ ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಬದುಕುವುದು ಭಗವಂತನಿಗೆ ಪ್ರಿಯವಾಗುವುದು. ಮಾನವೀಯ ಮೌಲ್ಯದ ಅರಿವಿರಬೇಕು. ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯ ಮನುಷ್ಯನಾಗುತ್ತಾನೆ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠವು ಆಯೋಜಿಸಿದ ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಪೂಜ್ಯ ಶ್ರೀಗಳವರ ಆಶಯದಂತೆ ಕಳೆದ ಅನೇಕ ವರ್ಷಗಳಿಂದ ಈ ಶಿಬಿರ ನಡೆಯುತ್ತಿದೆ. ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರವೇ ತಳಪಾಯ. ಈ ನಿಟ್ಟಿನಲ್ಲಿ ಶರದೃತು ಶಿಬಿರ ಪೂರಕವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಶಿವಗಿರಿ ಕಲ್ಲಡ್ಕ ಮಾತನಾಡಿ ತನ್ನ ಬಾಲ್ಯ ಸಮಯದ ಅನುಭವದ ತುಣುಕುಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು. ಮೈತ್ರೇಯಿ ಗುರುಕುಲದ ಭಗಿನಿ ರಾಜೇಶ್ವರೀ ಭಟ್ ಶುಭಹಾರೈಸಿ, ಭಾರತೀಯ ಪರಂಪರೆಯಲ್ಲಿ ಗುರು ಮತ್ತು ಗುರಿ ಅತ್ಯಂತ ಮಹತ್ವವಾದದ್ದು. ಜೀವನದ ಪರಮಗುರಿ ಸಂಸ್ಕಾರವಂತರಿಗೆ ಮಾತ್ರ ದೊರಕುವುದು. ಶಿಬಿರದಲ್ಲಿ ಸಿಕ್ಕಂತಹ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು.ಆಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಮೈತ್ರೇಯಿ ಗುರುಕುಲದ ಪಾರ್ವತಿ, ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್.ರೈ ಸ್ವಾಗತಿಸಿ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಶಿಬಿರಾರ್ಥಿಗಳಾದ ಸಾನಿಧ್ಯ ಪಕಳ ಮತ್ತು ಚಿನ್ಮಯ್ ಉಪಸ್ಥಿತರಿದ್ದರು. ಸಾಮೂಹಿಕ ಶಿಬಿರಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ 9ನೇ ತರಗತಿಯ ಶ್ರೀಜಿತ್ ಸ್ವಾಗತಿಸಿ, ವಿದ್ಯಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು, 8ನೇ ತರಗತಿಯ ಶರಣ್ಯ ವಂದಿಸಿದರು.
ಶಿಬಿರಾರ್ಥಿಗಳಿಂದ ಯೋಗಗುಚ್ಛ, ಸಂಸ್ಕ್ರತ ಸಂಭಾಷಣೆ, ಒನಕೆ ಓಬವ್ವ ಅಣುಕು ಪ್ರದರ್ಶನ, ಕಂಸವಧೆ ಯಕ್ಷಗಾನ ತಾಳಮದ್ದಳೆ ಜರಗಿತು.
Post a Comment