ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಮಾತೃಸೇವಾ ಸಂಕಲ್ಪಯಾತ್ರೆ" ಯ ದಕ್ಷಿಣಾಮೂರ್ತಿ ಕೃಷ್ಣ ಕುಮಾರ್ ಅವರಿಗೆ ಗೌರವಾರ್ಪಣೆ

'ಮಾತೃಸೇವಾ ಸಂಕಲ್ಪಯಾತ್ರೆ" ಯ ದಕ್ಷಿಣಾಮೂರ್ತಿ ಕೃಷ್ಣ ಕುಮಾರ್ ಅವರಿಗೆ ಗೌರವಾರ್ಪಣೆ


ಮುಳಿಯಾರು: ಸ್ಕೂಟರಿನಲ್ಲಿ ತಾಯಿಯನ್ನು ಕರೆದು ಕೊಂಡು ದೇಶದಾದ್ಯಂತ "ಮಾತೃಸೇವಾ ಸಂಕಲ್ಪಯಾತ್ರೆ" ಮಾಡುತ್ತಾ ಇರುವ ಮೈಸೂರಿನ ದಕ್ಷಿಣಾಮೂರ್ತಿ ಕೃಷ್ಣ ಕುಮಾರ್ ಹಾಗೂ ಇವರ ತಾಯಿ ಚೂಡಾರತ್ನಮ್ಮ ಇವರು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರಕ್ಕೆ ಸೆ.1ರಂದು ಭೇಟಿ ನೀಡಿದರು. ಒಂದು ದಿವಸ ಶ್ರೀ ಕ್ಷೇತ್ರದಲ್ಲಿ ತಂಗಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡು ಬಳಿಕ ತಮ್ಮ ಯಾತ್ರೆಯನ್ನು ಮುಂದುವರಿಸಿದರು. ಈ ವಿಶೇಷ ಸಾಧನೆ ಮಾಡುತ್ತಾ ಇರುವ ಈ ಸಾಧಕರಿಗೆ ಶ್ರೀ ಕ್ಷೇತ್ರದಲ್ಲಿ ಸ್ಮರಣಿಕೆ ಮತ್ತು ಪ್ರಸಾದವನ್ನಿತ್ತು ಶಾಲುಹೊದೆಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸಂಗೀತ ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್ ಮತ್ತು ಈಶ್ವರ ಭಟ್, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಸುರೇಶ ಭಟ್ ಕೊಜಂಬೆ, ಗಿರಿಜಾ ಸುರೇಶ ಭಟ್ ಇವರು ಉಪಸ್ಥಿತರಿದ್ದರು.  ಶ್ರೀ ಕ್ಷೇತ್ರ ಮೆನೇಜರ್ ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮಾಡಿದರು. ಗೋವಿಂದಬಳ್ಳಮೂಲೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಷೇತ್ರ ಅರ್ಚಕರಾದ ಅನಂತಪದ್ಮನಾಭ ಮಯ್ಯ ಸಾಂದರ್ಭಿಕ ಸಹಕಾರವನ್ನಿತ್ತರು.


ನಲುವತ್ತನಾಲ್ಕು ವರ್ಷದ ದಕ್ಷಿಣಾಮೂರ್ತಿ ಕೃಷ್ಣ ಕುಮಾರ್ ಇವರು ಐ ಟಿ ಉದ್ಯೋಗಿಯಾಗಿದ್ದು ಇದರಿಂದ ಸ್ವಯಂ ನಿವೃತ್ತಿ ಹೊಂದಿ  2018 ರಿಂದ ಮಾತೃ ಸೇವಾ ಸಂಕಲ್ಪ ಯಾತ್ರೆಯನ್ನು ಮಾಡುತ್ತಾ ಬಂದಿರುತ್ತಾರೆ. ತನ್ನ ತಂದೆಯವರು ನೀಡಿದ ಬಜಾಜ್ ಚೇತಕ್‌  ಸ್ಕೂಟರನ್ನು ಈ ಕಾರ್ಯಕ್ಕೆ ಬಳಸುತ್ತಿದ್ದಾರೆ. ಆ ಮೂಲಕ ಯಾತ್ರೆಯಲ್ಲಿ ತಂದೆಯೂ ಒಂದಿಗಿದ್ದಾರೆ ಎಂಬ ಸಂಕಲ್ಪ. ಅಡುಗೆ ಮನೆಯ ಜಗತ್ತಿನಲ್ಲಿ ತನ್ನ ಕುಟುಂಬದ ಆರೈಕೆಯಲ್ಲಿ ಬದುಕು ಸಾರ್ಥಕ ಮಾಡಿದ ತಾಯಿ ಚೂಡಾರತ್ನಮ್ಮ ಅವರ ಆಸೆಯನ್ನು ಪೂರೈಸಲು ಕೃಷ್ಣ ಕುಮಾರ ಅವರು ಈ ಸಂಕಲ್ಪಯಾತ್ರೆಯನ್ನು ಮಾಡುತ್ತಾ ಇದ್ದಾರೆ. ಈ ಮೂಲಕ ತಾಯಿಗೆ ಭಾರತ ದರ್ಶನವನ್ನು ಮಾಡಿಸುವ ಸಂಕಲ್ಪಮಾಡಿದ್ದಾರೆ. ಭಾರತದಾದ್ಯಂತ ಪುಣ್ಯಕ್ಷೇತ್ರಗಳು, ಧಾರ್ಮಿಕ ಕೇಂದ್ರಗಳು, ವಿಶೇಷ ಸ್ಥಳಗಳು, ಮೊದಲಾಗಿ ನೇಪಾಳ ಭೂತಾನ್ ಮೇನ್ಮಾರ್, ಚೈನಾ ಗಡಿ  ಮೊದಲಾದ ಸ್ಥಳಗಳಿಗೆ ಈಗಾಗಲೇ ಸುತ್ತಿ ಬಂದಿರುತ್ತಾರೆ. ಇಲ್ಲಿಯ ತನಕ 58302 ಕಿ ಮೀ ಕ್ರಮಿಸಿದ್ದಾರೆ.


ಊರಿನ ಪ್ರಾದೇಶಿಕ ಪರಿಚಯ ಪಡೆಯಲು ಮತ್ತು ಪ್ರಕೃತಿಯ ಸೊಬಗನ್ನು ಅನುಭವಿಸಲು, ಹಾಗೆಯೇ ತಾಯಿಯ ಅರೋಗ್ಯ ರಕ್ಷಣೆಯ ಕಾಳಜಿಯಿಂದಲೂ  ಸ್ಕೂಟರಿನಲ್ಲಿ ಬಹಳ ನಿಧಾನವಾಗಿಯೇ ಸಾಗುವುದು ಇಲ್ಲಿ ಗಮನಾರ್ಹ.  ಹಿತಮಿತ ಆಹಾರಪದ್ಧತಿಯನ್ನೂ ರೂಢಿಸಿಕೊಂಡಿರುವ ಕಾರಣ ಅನಾರೋಗ್ಯ ಸಮಸ್ಯೆಯೂ ಇಲ್ಲ ಎನ್ನುತ್ತಾರೆ ಇವರು. 


ಅಮ್ಮನ ಆಸೆಪೂರೈಸುವುದರಲ್ಲಿಯೇ ಬದುಕು ಸಾರ್ಥಕ. ಇದಕ್ಕಿಂತ ಹೆಚ್ಚಿನ ಭಾಗ್ಯ ಬೇರಿಲ್ಲ ಎನ್ನುತ್ತಾ ಈ ಸಂದೇಶವನ್ನು ಜಗತ್ತಿಗೆ ಪ್ರಕಟಪಡಿಸುತ್ತಾ ಇದ್ದಾರೆ.


ಹಲವು ಸಂಘಸಂಸ್ಥೆಗಳು ಇವರ ಸಾಧನೆಯನ್ನು ಮೆಚ್ಚಿ ಗೌರವಿಸಿರುತ್ತಾರೆ. ಇವರ ಬದುಕು ಒಂದು ಮಾದರಿ ಮತ್ತು ಇವರನ್ನು ಗುರುತಿಸಿ ಅಂಗೀಕರಿಸಬೇಕಾದ್ದು ನಮ್ಮ ಧರ್ಮವೂ ಹೌದು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post