ಮಂಗಳೂರು: ನಗರದ ಮೇರಿಹಿಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದದಳ ಕಚೇರಿಯಲ್ಲಿ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ಶಿಬಿರ, ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಜೀವರಕ್ಷಾ ಟ್ರಸ್ಟ್, ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಇದರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಇದರ ಆಶ್ರಯದಲ್ಲಿ ಶುಕ್ರವಾರ (ಆ.26) ಜರುಗಿತು.
ಸುಮಾರು 15 ಮಂದಿ ಗೃಹರಕ್ಷಕರು ಮತ್ತು 5 ಮಂದಿ ಪೌರರಕ್ಷಣ ತಂಡದ ಕಾರ್ಯಕರ್ತರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ಜನರ ಜೀವ ಉಳಿಸಲು ಗೃಹರಕ್ಷಕರನ್ನು ತರಬೇತಿಗೊಳಿಸಿ ಅವರನ್ನು ಜೀವರಕ್ಷಕರನ್ನಾಗಿ ತಯಾರಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ. ಅಪಘಾತ ಅಥವಾ ಇನ್ನಾವುದೇ ಅವಘಡಗಳಾದ ತಕ್ಷಣವೇ ಸ್ಪಂದಿಸಲು ಈ ತರಬೇತಿ ಗೃಹರಕ್ಷಕರಿಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜೀವರಕ್ಷಾ ಟ್ರಸ್ಟ್ ಇದರ ಮಂಗಳೂರು ವಲಯದ ಅಧಿಕಾರಿ ಡಾ|| ಕಿಶನ್ ರಾವ್ ಬಾಳಿಲ ಮಾತನಾಡಿ ಎಲ್ಲಾ ತುರ್ತು ಸಂದರ್ಭಗಳಲ್ಲಿ ಎಲ್ಲಾ ಕಡೆಗಳಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಈ ಸಂದರ್ಭದಲ್ಲಿ ವೈದ್ಯರು ಬರುವವರೆಗೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಜನಸಾಮಾನ್ಯರಿಗೆ ತರಬೇತಿ ಅತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಗೃಹರಕ್ಷಕರಿಗೆ ಈ ತರಬೇತಿ ಆಯೋಜಿಸಲಾಗಿದೆ ಎಂದು ನುಡಿದರು.
ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಶ್ಯಾಮ್ ಲಾಲ್ ಅವರು ಮಾತನಾಡಿ ಸಮಾಜದ ಸ್ವಸ್ತ್ಯ ಕಾಪಾಡುವಲ್ಲಿ ಗೃಹರಕ್ಷಕರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಅವರ ತರಬೇತಿಗಾಗಿ ಮತ್ತು ಅವರ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಸದಾ ಇರುತ್ತದೆ ಎಂದು ನುಡಿದರು.
ರೋಟರಿ ಕ್ಲಬ್ ಹಿಲ್ ಸೈಡ್ ಇದರ ಸದಸ್ಯ ಶ್ರೀ ಪ್ರವೀಣ್ ಉಡುಪ ಅವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಶ್ರೀ ಅಶೋಕ್ ರಾವ್, svs ವರ್ಮಾ, ವೀಣಾ, ಶ್ಯಾಮ್ ಲಾಲ್, ರಂಗನಾಥ್ ಕಿಣಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ|| ನಮ್ರತಾ ಶೆಟ್ಟಿ ಮತ್ತು ಡಾ|| ನಿಶಾಂತ್ ಕೃಷ್ಣ ಅವರು ಭಾಗವಹಿಸಿದ್ದರು. ಫಾದರ್ ಮುಲ್ಲರ್ ಆಸ್ಪತ್ರೆಯ ಗೃಹ ವೈದ್ಯರಾದ ಡಾ || ಜಸ್ಟಿನ್ ಮತ್ತು ಡಾ|| ಗಾಯತ್ರಿ ಈ ತರಬೇತಿಗೆ ಸಹಕರಿಸಿದರು. ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಈ ತರಬೇತಿ ಜರುಗಿತು ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment