
ಧರ್ಮಸ್ಥಳ: ಹಿರಿಯ ಮುತ್ಸದ್ದಿ, ಮಾಜಿ ಶಾಸಕ ಎ.ಜಿ. ಕೊಡ್ಗಿ ಅವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಗ್ರಾಮೀಣ ಅಭಿವೃದ್ಧಿಗೆ ಕೊಡ್ಗಿ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಪ್ರಕಟಣೆಯ ಪೂರ್ಣ ವಿವರ:
ಶ್ರೀ ಎ.ಜಿ. ಕೊಡ್ಗಿ ಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು.
ಮೂರನೆ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಶಾಸಕರಾಗಿ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶದ ಸರ್ವತೋಮುಖ ಪ್ರಗತಿಗೆ ಅವರು ವಿಶೇಷವಾಗಿ ಶ್ರಮಿಸಿದ್ದಾರೆ. ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಸೋಲಾರ್ ದೀಪ ಅಳವಡಿಕೆ, ರಸ್ತೆಗಳ ಅಭಿವೃದ್ಧಿ, ಕೃಷಿಯಲ್ಲಿ ಪ್ರಗತಿಯೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮದ ಪ್ರಗತಿಗೆ ಅವರು ಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.
ಅವರ ದೇಶಪ್ರೇಮ, ಸಮಾಜಮುಖಿ ಚಿಂತನೆಗಳು, ರಾಜಕೀಯವಾಗಿ ಅವರು ತಳೆದ ದೃಢ ನಿಲುವುಗಳು ಪ್ರಶಂಸನೀಯವಾಗಿವೆ. ಹಿರಿಯ ನಾಗರಿಕರಾಗಿಯೂ, ನಮ್ಮ ಕ್ಷೇತ್ರದ ಅಭಿಮಾನಿ ಭಕ್ತರಾಗಿಯೂ ನನಗೆ ಅವರು ಹಲವು ವರ್ಷಗಳಿಂದ ಚಿರಪರಿಚಿತರು ಹಾಗೂ ಆತ್ಮೀಯರಾಗಿದ್ದಾರೆ. ಅವÀರ ಅನೇಕ ಕಾರ್ಯಕ್ರಮಗಳಿಗೆ ನಮ್ಮ ಕ್ಷೇತ್ರದ ವತಿಯಿಂದ ನೆರವು ನೀಡಿ ಪ್ರೋತ್ಸಾಹಿಸಿದ್ದೇವೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.
-ಡಿ. ವೀರೇಂದ್ರ ಹೆಗ್ಗಡೆಯವರು
Post a Comment