ಪೆರಾಜೆ: ಮುಳ್ಳೇರಿಯ ಹವ್ಯಕ ಮಂಡಲ ಹಾಗೂ ಮಹಿಳೋದಯ ಬದಿಯಡ್ಕ ಆಶ್ರಯದಲ್ಲಿ ಕಳೆದ ತಿಂಗಳು (ಎಪ್ರಿಲ್ 16) ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕದಲ್ಲಿ ನಡೆದ, ಪಾಕಲೋಕದ ವ್ಯವಹಾರದಲ್ಲಿ ಉಳಿಕೆಯಾದ ಹಣವನ್ನು ಶ್ರೀಸಂಸ್ಥಾನದವರಿಗೆ ಮೇ 27ರಂದು ಮಾಣಿ ಮಠದಲ್ಲಿ ಸಮರ್ಪಿಸಲಾಯಿತು.
ಸಂಘಟನೆಗಾಗಿ ಚಟುವಟಿಕೆ, ಚಟುವಟಿಕೆಯಿಂದಾಗಿ ಸಂಘಟನೆ ಎಂಬುದು ಸಾರ್ವಕಾಲಿಕ ಸತ್ಯವಾದ ಮಾತು. ಮುಳ್ಳೇರಿಯ ಮಂಡಲವು ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ಚಿಂತಿತರಾಗಿದ್ದಾಗ ಮೂಡಿ ಬಂದ್ದದ್ದೇ ವಿವಿವಿ ಪಾಕಲೋಕ.
ಘನ ಉದ್ದೇಶದ ಹಿನ್ನೆಲೆಯಲ್ಲಿ ಮಂಡಲ ಮಟ್ಟದ ಸಂಪರ್ಕ, ಪ್ರತಿ ಮನೆಯವರ ಪಾಲ್ಗೊಳ್ಳುವಿಕೆ, ಹನಿ ಹನಿ ಕೂಡಿ ಹಳ್ಳ ಎಂಬಂತೆ ದೊಡ್ಡ ನಿಧಿಯ ಸಂಚಯನ ಇದು ಪಾಕಲೋಕದ ಒಟ್ಟೂ ಚಿತ್ರಣ.
ಬಾಳೆಯ ವಿವಿಧ ಉಪಯೋಗಗಳಲ್ಲಿ ಪ್ರಮುಖವಾದ ಆಹಾರೋತ್ಪನ್ನಗಳ ತಯಾರಿಗೆ ಇಡೀ ಮಂಡಲದ ಮಾತೆಯರು ಮಾತ್ರವಲ್ಲ, ಹತ್ತಿರದ ಮಂಡಲದವರೂ ಸೆರಗು ಕಟ್ಟಿ ಬಂದರು. ಸಂಘಟನೆಯ ಎಲ್ಲಾ ವಿಭಾಗಗಳನ್ನೂ ಈ ಕಾರ್ಯದಲ್ಲಿ ಜೋಡಿಸಿದ್ದರಿಂದಾಗಿ, ಆ ಎರಡು ತಿಂಗಳು ಬಾಳೆಯದ್ದೇ ಸುದ್ದಿ.
ಪ್ರತಿ ಮನೆಯಿಂದ ಬಾಕಾಹು (ಬಾಳೆ ಕಾಯಿ ಹುಡಿ) ಸಮರ್ಪಣೆಯಾಗಬೇಕು ಎಂಬ ಕರೆಗೆ ಓಗೊಟ್ಟ ಕಿಂಕರರ ಸೇವೆಯ ಪರಿಯಿಂದಾಗಿ, ಕೊನೆಗೆ ಬಾಕಾಹು ತಯಾರಿ ನಿಲ್ಲಿಸಿ ಎನ್ನುವ ಸೂಚನೆ ಕೊಡುವ ಹಂತಕ್ಕೆ ಬಂದುಬಿಟ್ಟಿತ್ತು.
ಬಾಳೆಯ ವಿವಿಧ ಖಾದ್ಯಗಳ ತಯಾರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾದ ಪಾಕಪ್ರವೀಣ ತಂಡಗಳು ದೊಡ್ಡ ಸೇವೆಯನ್ನೇ ಸಮರ್ಪಿಸಿದ್ದರು. ಅವರೊಂದಿಗೆ ಮಾತೆಯರ ಕೈಯಡುಗೆಯ ರುಚಿಯೂ ಸೇರಿತ್ತು.ಇದರ ಫಲಶೃತಿಯು ಮೇಳದ ದಿನ ಕಂಡು ಬಂತು. ಸಂಜೆ 3 ಗಂಟೆಗೇ ಬಾಳೆಹಣ್ಣಿನ ಹೋಳಿಗೆಯ ಕೌಂಟರ್ ನಿಲ್ಲಿಸಬೇಕಾಗಿ ಬಂತು. ಬಂದವರೆಲ್ಲರೂ ಖುಷಿ ಪಟ್ಟು ಖರೀದಿಸಿದರು. ರಾತ್ರಿ ಲೆಕ್ಕ ಹಾಕುವಾಗ ರೂ 4 ಲಕ್ಷಕ್ಕೂ ಮಿಕ್ಕಿದ ವ್ಯವಹಾರ.
ವಿಶಿಷ್ಟ ಸ್ವರೂಪದ ಉದ್ಘಾಟನೆ, ವಿಶೇಷ ಬಾಳೆ ಕೃಷಿ ಮಾಡಿದ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ, ಬಾಳೆಯ ಬಗ್ಗೆ ಪ್ರದರ್ಶಿನಿ, ಬಾಳೆಯ ವಿಷಯದಲ್ಲಿ ಸ್ಫರ್ಧೆಗಳು, ವಿಷಮುಕ್ತ ಬಾಳೆಯ ಉತ್ಪನ್ನಗಳ ಮಾರಾಟ ಇವೆಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ಕೊನೆಗೆ ಧ್ವಜಾವತರಣ ಆಗುವಾಗ ಕಿಂಕರರೆಲ್ಲರ ದೇಹದಲ್ಲಿ ಸುಸ್ತು ಕಂಡರೂ, ಮನಸ್ಸಿನಲ್ಲಿ ಧನ್ಯತೆಯ ಭಾವನೆಯು ತುಂಬಿತ್ತು.
ವಿವಿವಿ ಪಾಕಲೋಕದ ವ್ಯವಹಾರದ ಉಳಿಕೆಯಲ್ಲಿ ರೂ 2 ಲಕ್ಷ ರೂಪಾಯಿಗಳ ಕಾಣಿಕೆಯನ್ನು ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿರುವ ನಮ್ಮ ಹೆಮ್ಮೆಯ ಸೇವಾ ಸೌಧಕ್ಕೆ ಶ್ರೀ ಸಂಸ್ಥಾನದವರ ಸಮ್ಮುಖದಲ್ಲಿ ಸಮರ್ಪಣೆ ಮಾಡಲಾಗಿದೆ.
ಕಾರ್ಯಕ್ರಮದ ಒಟ್ಟು ಸ್ವರೂಪದ ಬಗ್ಗೆ ಶ್ರೀ ಸಂಸ್ಥಾನದವರು ಮನದಟ್ಟು ಮಾಡಿ ಅನುಗ್ರಹವಿತ್ತರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment