ಮಂಗಳೂರು: 'ಕವಿತೆ ಬರೆಯಲು ಎಲ್ಲರಿಂದ ಸಾಧ್ಯವಿಲ್ಲ. ಕವಿತೆ ಹೆಣೆಯುವ ಕೌಶಲ್ಯ ಒಂದು ವರವಿದ್ದಂತೆ. ಹಿರಿಯ ಕಿರಿಯ ಕವಿಗಳ ಕವಿತೆಗಳ ತುಲನೆ ಮತ್ತು ಅಧ್ಯಯನ ಭವಿಷ್ಯದ ಉತ್ತಮ ಕಾವ್ಯಗಳಿಗೆ ದಾರಿದೀಪ ಆಗಬಹುದು' ಎಂದು ಕವಯತ್ರಿ ವಾಣಿ ಲೋಕಯ್ಯ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಮಂಗಳೂರಿನ ವಸಂತ ಮಹಲ್ ಸಭಾಭವನದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ 'ಕಾವ್ಯ ಸಂಚಯ' ಕವಿ ಗೋಷ್ಠಿಯ ಅಧ್ಯಕ್ಷತೆ ಮಹಿಸಿ ಮಾತನಾಡಿದರು. 'ಕವಿತೆಗಳ ಆಳಕ್ಕಿಳಿಯುವ ಸಾಹಸ ಒಳ್ಳೆಯದೇ ಆದರೂ ಕಠಿಣ' ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ವತಿಯಿಂದ ಹೊರತಂದ 'ಕವಿತೆಯ ಸಾರ್ಥಕತೆ' ಕೃತಿಯನ್ನು ಗಾಯಕಿ ಕವಯತ್ರಿ ಆಕೃತಿ ಐ ಎಸ್ ಭಟ್ ಬಿಡುಗಡೆ ಗೊಳಿಸಿದರೆ, 'ಚುಸಾಪ ಸಮಗ್ರ ಸಾಹಿತ್ಯ ಸಂಪುಟ' ಗ್ರಂಥವನ್ನು ಪತ್ರಕರ್ತ ಎಡ್ವರ್ಡ್ ಲೋಬೋ ಲೋಕಾರ್ಪಣೆ ಮಾಡಿದರು.
ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಕಲ್ಲಚ್ಚು ಪ್ರಕಾಶನದ ಅಧ್ಯಕ್ಷ ಮಹೇಶ್ ಆರ್ ನಾಯಕ್, ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ಜತೆ ಕಾರ್ಯದರ್ಶಿ ವೆಂಕಟೇಶ್ ಗಟ್ಟಿ, ಪಣಿಯಾಡಿ ಪ್ರಶಸ್ತಿ ವಿಜೇತ ಲೇಖಕಿ ಅಕ್ಷಯ ಆರ್ ಶೆಟ್ಟಿ, ಹಿರಿಯ ಕವಿ ಡಾ.ಸುರೇಶ್ ನೆಗಳಗುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ 30 ಕವಿಗಳು ತಮ್ಮ ಕವನಗಳನ್ನು ಪ್ರಸ್ತುತ ಪಡಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment