ಉಡುಪಿ: ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಪ್ರೊ.ಎಂ. ಕೇಶವ ಮಯ್ಯ (80 ವರ್ಷ) ಇಂದು (ಏ.08) ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಗಂಗೊಳ್ಳಿ ಸಮೀಪದ ಮಂಕಿಯ ಸ್ವಗೃಹದಲ್ಲಿ ನಿಧನರಾದರು.
1970-80 ರ ದಶಕದಲ್ಲಿ ಸ್ವತಃ ಆಟಕ್ಕೆ ಹೋಗಿ ರಂಗಸ್ಥಳದ ಮುಂದಿನ ಸಾಲಿನಲ್ಲಿ ಕುಳಿತು ಟೇಪ್ ರೆಕಾರ್ಡರ್ನಲ್ಲಿ ಧ್ವನಿಮುದ್ರಿಸಿಕೊಂಡು ಅವುಗಳನ್ನು ಬಹು ಜತನದಲ್ಲಿ ಇಂದಿನವರೆಗೂ ಕಾಪಿಟ್ಟುಕೊಂಡಿದ್ದರು. ಯಕ್ಷಗಾನ ಆಸಕ್ತರಿಗೆ ಅದನ್ನ ನೀಡುತ್ತಿದ್ದರು. ಇಡಗುಂಜಿ ಮೇಳದ ಕೆರೆಮನೆ ಮಹಾಬಲ ಹೆಗ್ಡೆ ಮತ್ತು ಶಂಭು ಹೆಗಡೆಯವರ ಕಟ್ಟಾ ಅಭಿಮಾನಿಯಾಗಿದ್ದರು. ಹೆಚ್ಚಿನ ಎಲ್ಲಾ ಹಳೆಯ ಭಾಗವತರ ಹಾಡುಗಾರಿಕೆಯ ಧ್ವನಿಮುದ್ರಣ ಅವರ ಸಂಗ್ರಹದಲ್ಲಿದೆ.
ಬಹುಮುಖೀ ಆಸಕ್ತಿಯ ಮಯ್ಯರಲ್ಲಿ ಶಾಸ್ತ್ರೀಯ ಸಂಗೀತದ ಧ್ವನಿ ಮುದ್ರಣಗಳ ದೊಡ್ಡ ಸಂಗ್ರಹವಿದೆ. ಅವರ ಅಪೇಕ್ಷೆಯಂತೆ ದೇಹವನ್ನು ಮಕ್ಕಳು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾನವಾಗಿ ನೀಡಲು ಸಂಕಲ್ಪಿಸಿದ್ದಾರೆ. ಸಮಯಪಾಲನೆ ಮತ್ತು ಶಿಸ್ತಿಗೆ ಪ್ರಾಶಸ್ತ್ಯ ನೀಡುತ್ತಿದ್ದ ಮಯ್ಯರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment