ಹೈದರಾಬಾದ್: ಹಳಿಯ ಮೇಲೆ ನಿಂತವರ ಮೇಲೆ ರೈಲು ಹರಿದಿದ್ದು, ಐದು ಮಂದಿ ಸಾವನ್ನಪ್ಪಿದ್ದು, ಓರ್ವ ತೀವ್ರ ಗಾಯಗೊಂಡಿರುವ ಘಟನೆಯೊಂದು ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಬಟುವಾ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ದುರಂತ ನಡೆದಿದೆ.
ಅಪಘಾತ ನಡೆದ ಸ್ಥಳಕ್ಕೆ ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಪ್ರಯಾಣಿಕರು ತಾವು ಪ್ರಯಾಣಿಸುತ್ತಿದ್ದ ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತುರ್ತು ಸರಪಳಿಯನ್ನು ಎಳೆದರು.
ಅವರು ರೈಲಿನಿಂದ ಇಳಿದು ಹಳಿಗಳ ಮೇಲೆ ನಿಂತಿದ್ದರು. ಆಗ ಎದುರಿನಿಂದ ಬಂದ ಇನ್ನೊಂದು ರೈಲು 'ಕೋನಾರ್ಕ್ ಎಕ್ಸ್‌ಪ್ರೆಸ್' ಇವರು ನಿಂತಿದ್ದ ಹಳಿಯ ಮೇಲೆ ಬಂದಿತ್ತು. ಇದನ್ನು ತಿಳಿಯದ ದುರ್ದೈವಿಗಳು ರೈಲಿನಡಿ ಸಿಲುಕಿಕೊಂಡಿದ್ದಾರೆ. ರೈಲು ಭುವನೇಶ್ವರದಿಂದ ವಿಶಾಖಪಟ್ಟಣಂಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
ಈ ಮೃತರಲ್ಲಿ ಇಬ್ಬರು ಅಸ್ಸಾಂ ಮೂಲದವರು ಎಂದು ಗುರುತಿಸಲಾಗಿದೆ. ಉಳಿದವರ ಪತ್ತೆ ಹಚ್ಚಲು ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Post a Comment