ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು: ನವೀಕೃತ 'ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ' ಇಂದು ಸಂಜೆ ಲೋಕಾರ್ಪಣೆ

ಮಂಗಳೂರು: ನವೀಕೃತ 'ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ' ಇಂದು ಸಂಜೆ ಲೋಕಾರ್ಪಣೆ


ಮಂಗಳೂರು: ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ  ಜನ್ಮದಿನವಾದ ಇಂದು (ಜ.23) ಅವರ ಸ್ಮರಣಾರ್ಥವಾಗಿ ನಗರದ ಕೊಡಿಯಾಲ್‌ಬೈಲ್‌ನಲ್ಲಿ ನವೀಕರಣಗೊಂಡು ನಿರ್ಮಾಣವಾಗಿರುವ 'ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ'  ಲೋಕಾರ್ಪಣೆಗೊಳ್ಳಲಿದೆ.


ಸಂಜೆ 7 ಗಂಟೆಗೆ ಕೊಡಿಯಾಲ್‌ಬೈಲ್‌ನಲ್ಲಿ ಈ ಸಂಬಂಧ ಕಾರ್ಯಕ್ರಮ ಆಯೋಜಿಸಲಾಗಿದೆ.  ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ವಿಶೇಷ ಮುತುವರ್ಜಿಯಿಂದ ಈ ಸುಂದರ ವೃತ್ತ ನಿರ್ಮಾಣಗೊಂಡಿದೆ. ಸೇವಾಂಜಲಿ ಟ್ರಸ್ಟ್‌ ಇದನ್ನು ನಿರ್ಮಿಸಿದೆ.  ಶ್ರೀಮತಿ ವನಿತಾ ಚ್ಯುತ ಪೈ ಸ್ಮರಣಾರ್ಥ ಅವರ ಮಕ್ಕಳು ನಡೆಸುತ್ತಿರುವ ಫುಜ್ಲಾನಾ ಗ್ರೂಪ್‌ ಈ ವೃತ್ತದ ನಿರ್ವಹಣೆ ಮಾಡಲಿದೆ. ಈ ವೃತ್ತವನ್ನು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಲೋಕಾರ್ಪಣೆ ಮಾಡಲಾಗುವುದು.


ಭಾರತದ ಮೊದಲ ರಾಷ್ಟ್ರಕವಿ ಬಿರುದಾಂಕಿತ ಮಂಜೇಶ್ವರ ಗೋವಿಂದ ಪೈಯವರು ಕವಿ, ಕಥಾ ಲೇಖಕ, ನಾಟಕಕಾರ, ಸಂಶೋಧಕರಾಗಿ ಖ್ಯಾತಿಗಳಿಸಿದವರು. ಕನ್ನಡ, ತುಳು, ಕೊಂಕಣಿ ಸಹಿತ 25 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ ಮಂಜೇಶ್ವರ ಗೋವಿಂದ ಪೈಯವರ ಕೃತಿಗಳು ಜಾಗತಿಕ ಮಟ್ಟದಲ್ಲಿಯೂ ಖ್ಯಾತಿಗೊಂಡಿವೆ. ಬಡವರ ಮತ್ತು ಶೋಷಿತರ ಧ್ವನಿಯಾಗಿ ಇವರ ಲೇಖನಿಗಳಲ್ಲಿ ಸಾಹಿತ್ಯಕೃಷಿ ಮೂಡಿಬಂದಿದೆ.


ಗಿಳಿವಿಂಡು, ನಂದಾದೀಪ, ಹೃದಯರಂಗ, ಹೆಬ್ಬೆರಳು, ಚಿತ್ರಭಾನು, ವೈಶಾಖೆ, ಮಣ್ಣಿನ ಸೊಗಡು, ತಾಯಿ, ಗೋಲ್ಗೊಥಾ, ಗೊಮ್ಮಟ ಜಿನಸ್ತುತಿ ಸಹಿತ ಅನೇಕ ಕೃತಿಗಳು ಜನಮಾನಸದಲ್ಲಿ ಇಂದಿಗೂ ಅಚ್ಚೊತ್ತಿದೆ. ತುಳು ಭಾಷೆ, ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ ಅದನ್ನು ವಸ್ತುನಿಷ್ಟವಾಗಿ ಹೇಳಬಲ್ಲ ಕೆಲವೇ ವಿದ್ವಾಂಸರಲ್ಲಿ ಇವರು ಒಬ್ಬರಾಗಿದ್ದರು. ಜಪಾನಿ ಭಾಷೆಯ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹಿರಿಮೆ ಇವರದ್ದು.


ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಯನ್ನು ಭವಿಷ್ಯದ ಪೀಳಿಗೆ ಸ್ಮರಿಸುತ್ತಾ, ಮಾದರಿಯಾಗಿಟ್ಟುಕೊಳ್ಳಬೇಕು ಎನ್ನುವ ಉದ್ದೇಶದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಕುಳಿತ ಭಂಗಿಯ ಕಂಚಿನ ಪುತ್ಥಳಿಯನ್ನು ಹೊಂದಿರುವ, ವೃತ್ತದಲ್ಲಿರುವ ಪ್ರಾಚೀನ ಬಾವಿಯನ್ನು ಹಾಗೆಯೇ ಉಳಿಸಿಕೊಂಡು, ಕಾರಂಜಿಗಳ ಆಕರ್ಷಕ ಚಿತ್ತಾರದೊಂದಿಗೆ, ಮುದಗೊಳಿಸುವ ಹೂಗಳ ನೋಟದೊಂದಿಗೆ ನವೀಕರಣಗೊಂಡ ವೃತ್ತ ಲೋಕಾರ್ಪಣೆಗೊಳ್ಳಲಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post