ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ವಿದ್ವಾಂಸ, ನಿವೃತ್ತ ಮುಖ್ಯೋಪಾಧ್ಯಾಯ ಅಡ್ಯನಡ್ಕ ನರಸಿಂಹ ಭಟ್ಟರು ಇನ್ನಿಲ್ಲ

ಹಿರಿಯ ವಿದ್ವಾಂಸ, ನಿವೃತ್ತ ಮುಖ್ಯೋಪಾಧ್ಯಾಯ ಅಡ್ಯನಡ್ಕ ನರಸಿಂಹ ಭಟ್ಟರು ಇನ್ನಿಲ್ಲ



ಕಾಸರಗೋಡು: ಹಿರಿಯ ವಿದ್ವಾಂಸರೂ, ಭಾಷಾಂತರಕಾರರೂ, ನಿವೃತ್ತ ಮುಖ್ಯ ಉಪಾಧ್ಯಾಯರೂ ಕಾಸರಗೋಡು ಹವ್ಯಕ ಭಾರತೀ ಸೇವಾ ಟ್ರಸ್ಟ್‌ನ ಹಿರಿಯ ಸದಸ್ಯರೂ ಆದ ಅಡ್ಯನಡ್ಕ ನರಸಿಂಹ ಭಟ್ಟರು ಇನ್ನಿಲ್ಲ. ಇಂದು ಮುಂಜಾನೆ 2.15ಕ್ಕೆ ಅಲ್ಪ ಕಾಲದ ಅಸ್ವಾಸ್ಥ್ಯದ ನಂತರ ಅವರು ಇಹಲೋಕ ತ್ಯಜಿಸಿದರು.


ಡಿವಿಜಿಯವರ ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗಗಳನ್ನು ನರಸಿಂಹ ಭಟ್ಟರು ಇಂಗ್ಲಿಷ್‌ಗೆ ಭಾಷಾಂತರಿಸಿದ್ದರು.


ಅಡ್ಯನಡ್ಕ ನರಸಿಂಹ ಭಟ್ ಅವರು ಕಾಸರಗೋಡಿನ ಕೋಟೆಕಣಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.


ಅಡ್ಯನಡ್ಕದ ಹಯರ್ ಎಲಿಮೆಂಟರಿ ಶಾಲೆಯ (ಇಂದಿನ ಜನತಾ ಹಿರಿಯ ಪ್ರಾಥಮಿಕ ಶಾಲೆ) ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ್ದ ದಿವಂಗತ ಎ. ತಿಮ್ಮಣ್ಣ ಭಟ್ ಮತ್ತು ದಿವಂಗತ ಶ್ರೀಮತಿ ಶಂಕರಿ ಅಮ್ಮ ಅವರ ಪುತ್ರನಾಗಿ 1931ರ ಆಗಸ್ಟ್‌ 20ರಂದು ನರಸಿಂಹ ಭಟ್ ಜನಿಸಿದ್ದರು.


ಬಿ.ಇ.ಬಿ.ಟಿ ಹೈಸ್ಕೂಲು ಅಧ್ಯಾಪಕ ಪ್ರಶಿಕ್ಷಣ ಪಡೆದ ಅವರು ಇಂಗ್ಲಿಷ್ ಮತ್ತು ಸಾಮಾಜಿಕ ಅಧ್ಯಯನ ವಿಷಯಗಳ ಬಗ್ಗೆ ಅಧ್ಯಾಪನ ಮಾಡಿದ್ದರು.


1954ರ ಜೂನ್‌ನಲ್ಲಿ ಬಜಪೆಯ ಸೈಂಟ್ ಜೋಸೆಫ್ಸ್‌ ಹೈಸ್ಕೂಲಿನಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಕ ವೃತ್ತಿ ಆರಂಭಿಸಿದರು. ಬಳಿಕ ಮುನಿಸಿಪಲ್‌ ಹೈಸ್ಕೂಲು ಹೊಸಪೇಟೆ, ಸೈಂಟ್ ಮೈಕೆಲ್ಸ್‌ ಹೈಸ್ಕೂಲು ಮಡಿಕೇರಿ, ಗವರ್ನಮೆಂಟ್ ಹೈಸ್ಕೂಲು ಕಾಸರಗೋಡು- ಈ ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.


1956ರಿಂದ 1966ರ ವರೆಗೆ ಶಾಲಾ ಅಧ್ಯಾಪಕ ಸಂಘದ ಕಾರ್ಯದರ್ಶಿಯಾಗಿ, 1957ರಿಂದ 1966ರ ವರೆಗೆ ಮಲಬಾರ್ ಟೀಚರ್ಸ್‌ ಗಿಲ್ಡ್‌ನ ಕಾರ್ಯಕಾರಿ ಸಮಿತಿ ಸದಸ್ಯ, ಡಿಪಾರ್ಟ್‌ಮೆಂಟ್‌ ಗ್ರಾಜುಯೇಟ್‌ ಟೀಚರ್ಸ್‌  ಅಸೋಸಿಯೇಶನ್‌ನ ಕಾಸರಗೋಡು ಜಿಲ್ಲಾಧ್ಯಕ್ಷ, ಜೂನಿಯರ್ ಡಿವಿಶನ್‌ ಎನ್‌ಸಿಸಿ ಆಫೀಸರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. 1966ರಿಂದ 68ರ ವರೆಗೆ ಎರಡು ವರ್ಷಗಳ ಕಾಲ ಕುಂಬಳೆ ಮತ್ತು ಬೇಕಲ ಉಪಜಿಲ್ಲಾ ವಿದ್ಯಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.


1987ರ ಮಾರ್ಚ್‌ನಲ್ಲಿ ನಿವೃತ್ತರಾದ ಬಳಿಕವೂ ಕಾಸರಗೋಡಿನ ಬಿಇಎಂ ಹೈಸ್ಕೂಲಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗೌರವ ಶಿಕ್ಷಕರಾಗಿ ಇಂಗ್ಲಿಷ್ ಪಾಠ ಮಾಡುತ್ತಿದ್ದರು.


ಒಟ್ಟು 37 ಕೃತಿಗಳನ್ನು ರಚಿಸಿ ಪ್ರಕಟಿಸಿರುವ ನರಸಿಂಹ ಭಟ್ಟರು, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಸರ್ವಜ್ಞನ ತ್ರಿಪದಿಗಳು ಸೇರಿದಂತೆ ಹಲವು ಕನ್ನಡ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಿದ್ದರು. ಅಲ್ಲದೆ ಇಂಗ್ಲಿಷ್‌ನಿಂದಲೂ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post