ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ವ-ಉದ್ಯೋಗದ ಮೂಲಕ ಶೋಷಿತ ಸಮುದಾಯ ಮುಖ್ಯವಾಹಿನಿಗೆ: ಉಡುಪಿ ಜಿಪಂ ಸಿಇಓ ಡಾ. ನವೀನ್ ಭಟ್

ಸ್ವ-ಉದ್ಯೋಗದ ಮೂಲಕ ಶೋಷಿತ ಸಮುದಾಯ ಮುಖ್ಯವಾಹಿನಿಗೆ: ಉಡುಪಿ ಜಿಪಂ ಸಿಇಓ ಡಾ. ನವೀನ್ ಭಟ್


ಉಡುಪಿ: ಸಮಾಜದಲ್ಲಿ ಶೋಷಿತ ಸಮುದಾಯದ ಜನರು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವ ಉದ್ದೇಶದಿಂದ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತಿಯ ನಂತರ ಸ್ವ-ಉದ್ಯೋಗ ಘಟಕ ಪ್ರಾರಂಭಿಸಲು ಜಿಲ್ಲಾ ಪಂಚಾಯತ್‌ನಿಂದ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಹೇಳಿದರು.


ಅವರು ಇಂದು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ತಾಲೂಕು ಪಂಚಾಯತ್ ಕಾರ್ಕಳ ಮತ್ತು ರುಡ್ ಸೆಟ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬ್ರಹ್ಮಾವರ ಇವರ ಸಹಯೋಗದೊಂದಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮತ್ತು ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ನಡೆದ ಹತ್ತು ದಿನಗಳ ಉಚಿತ ಫೈಲ್, ಪೇಪರ್ ಬ್ಯಾಗ್ ಹಾಗೂ ಅಡಿಕೆ ಹಾಳೆ ತಟ್ಟೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸ್ವ-ಉದ್ಯೋಗ ಘಟಕಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಹಾಗೂ ಸರ್ಕಾರಿ ಕಛೇರಿಗಳಿಗೆ ಸದರಿ ಘಟಕದಿಂದ ಫೈಲ್‌ಗಳ ಖರೀದಿಗೆ ಕ್ರಮ ವಹಿಸಲಾಗುವುದು ಎಂದ ಅವರು, ಎಲ್ಲಾ ಅಭ್ಯರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆದುಕೊಂಡು ಸ್ವ-ಉದ್ಯೋಗ ಘಟಕ ಪ್ರಾರಂಭಿಸಬೇಕು. ವಿಶೇಷ ವರ್ಗಗಳಲ್ಲಿ ಇನ್ನಷ್ಟು ಮಂದಿ ಸ್ವ-ಉದ್ಯೋಗದ ಬಗ್ಗೆ ಆಸಕ್ತಿ ಹೊಂದಿದ್ದಲ್ಲಿ ಅವರಿಗೂ ಸಹ ತರಬೇತಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ನ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಂ.ಎನ್ ಗುರುದತ್ತ್, ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಪಾಪನಾಯಕ್, ಆಸರೆ ಸಮುದಾಯ ಸಂಘಟನೆಯ ಅಧ್ಯಕ್ಷ ಸುದರ್ಶನ್, ದೀಪಜ್ಯೋತಿ ಸಂಸ್ಥೆಯ ಪ್ರತಿನಿಧಿ ಶಾಂತಿ ಉಪಸ್ಥಿತರಿದ್ದರು.


ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಗಣೇಶ್ ಸ್ವಾಗತಿಸಿದರು. ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ನಿರೂಪಿಸಿ, ಮರ್ವಿನ್ ವಂದಿಸಿದರು.

0 Comments

Post a Comment

Post a Comment (0)

Previous Post Next Post