ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಕುರಿತಂತೆ ಚರ್ಚಿಸಲು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಘಟಕ/ ಸ್ವಾಯತ್ತ / ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರುಗಳ ಸಭೆಯನ್ನು ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಕಸ ವಿಲೇವಾರಿ ಸಮಸ್ಯೆ ಇತ್ಯರ್ಥಕ್ಕೆ ಇಚ್ಚಾಶಕ್ತಿ ಅಗತ್ಯ. ಜನರು ಮತ್ತು ಆಡಳಿತ ನಡುವಿನ ಸಹಕಾರ ಮತ್ತು ಸಹಯೋಗದಲ್ಲಿ ಅದ್ಭುತವನ್ನು ಸಾಧಿಸಬಹುದು. ಕಾಲೇಜುಗಳು ಪಾಲ್ಗೊಳ್ಳುವಿಕೆ ಮಾತ್ರವಲ್ಲದೆ, ಗುರಿಯೆಡೆಗೆ ಬದ್ಧತೆ ತೋರಿಸಬೇಕು. “ತರಬೇತಿ ಪಡೆದ ಎನ್ಎಸ್ಎಸ್, ರೆಡ್ಕ್ರಾಸ್ ಮೊದಲಾದ ಸಂಸ್ಥೆಗಳ ಸ್ವಯಂಸೇವಕರು ತಂಡವಾಗಿ ಮಹತ್ವದ ಪಾತ್ರ ವಹಿಸಬಲ್ಲರು. ಜೊತೆಗೆ ಹಣಕಾಸು ಸೌಲಭ್ಯವೂ ಮುಖ್ಯವಾಗುತ್ತದೆ,” ಎಂದರು.
ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಆಕ್ಷಯ್ ಶ್ರೀಧರ್, ಮಂಗಳೂರಿನಲ್ಲಿ ಯೋಜನೆ ಅನುಷ್ಠಾನ ಸಾಧ್ಯವಾಗದಿದ್ದರೆ ಬೇರೆ ಎಲ್ಲಿಯೂ ಸಾಧ್ಯವಿಲ್ಲ. ಕಸ ವಿಲೇವಾರಿ ಸಮಸ್ಯೆಯ ಗಂಭೀರತೆ ಅರ್ಥವಾಗದಿರುವುದಕ್ಕೆ ಜನರು ಮತ್ತು ಆಡಳಿತ ಎರಡರ ಲೋಪವೂ ಇದೆ. ಸಮುದಾಯ ಸಹಭಾಗಿತ್ವ ಮತ್ತು ಸಂಘಟನೆಗಳ ಸಹಯೋಗದಲ್ಲಿ ಇದನ್ನು ನಿವಾರಿಸಬಹುದು. ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬಹುದು, ಎಂದರು.
ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ನಿರ್ದೇಶಕಿ ರೀಟಾ ನೋರೋನ್ಹಾ, ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ಮುಖ್ಯ. ಜನರಲ್ಲಿ ಜವಾಬ್ದಾರಿ ಮೂಡಿದಾಗ ಸಹಜವಾಗಿಯೇ ಸಮಸ್ಯೆ ನಿವಾರಣೆಯಾಗುತ್ತದೆ, ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರೊ. ಪ್ರಶಾಂತ್ ನಾಯ್ಕ್ ಅವರು ಎನ್ಸಿಸಿ, ಎನ್ಎಸ್ಎಸ್ ಸ್ವಯಂಸೇವಕರು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಕ್ರಿಯರಾಗಬೇಕು. ಕಸ ಹೆಕ್ಕುವುದಕ್ಕಿಂತಲೂ ಪರಿಸರ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ, ಎಂದರು.
ಬಳಿಕ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ನಗರದ ನಾಗರಿಕ ಪ್ರತಿನಿಧಿಗಳೂ ಚರ್ಚೆಯಲ್ಲಿ ಪಾಲ್ಗೊಂಡು ಕಸ ವಿಲೇವಾರಿ ಸಮಸ್ಯೆಯ ಗಂಭೀರತೆಯ ಪರಿಚಯಿಸುವ ಜೊತೆಗೆ ಪಾಲಿಕೆ ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment