ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಸರ ಸಂರಕ್ಷಣೆ ನಾಗರಿಕರ ಪ್ರಮುಖ ಹೊಣೆ: ಶಾಸಕ ಡಾ. ಭರತ್ ಶೆಟ್ಟಿ

ಪರಿಸರ ಸಂರಕ್ಷಣೆ ನಾಗರಿಕರ ಪ್ರಮುಖ ಹೊಣೆ: ಶಾಸಕ ಡಾ. ಭರತ್ ಶೆಟ್ಟಿ

ಆಳ್ವಾಸ್‌ನಲ್ಲಿ ಗ್ರೀನ್ ಪಾರ್ಲಿಮೆಂಟ್- 2021




ಮೂಡುಬಿದಿರೆ: ವಿದ್ಯಾರ್ಥಿಗಳ ಯೋಚನೆಗಳು ಪರಿಸರ ಸಂರಕ್ಷಣೆಯತ್ತ ಇರಲಿ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು. 


ಕರ್ನಾಟಕ ಅರಣ್ಯ ಇಲಾಖೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ಹಾಗೂ ಕುದೆರಮುಖ ವನ್ಯಜೀವಿ ಘಟಕದ ಸಹಯೋಗದಲ್ಲಿ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ನಡೆದ 'ಗ್ರೀನ್ ಪಾರ್ಲಿಮೆಂಟ್ -2021' ಅಣಕು ಸಂಸತ್ತಿನ ಉದ್ಘಾಟನಾ ಸಮಾರಂಭದ  ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶೈಕ್ಷಣಿಕ ವಿಚಾರಗಳಿಗೆ ಒತ್ತು ನೀಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಕಡಿಮೆಯಾಗಿದೆ. ಜನರ ದುರಾಸೆಯ ಸ್ವಭಾವದಿಂದ ಹೆಕ್ಟೇರ್ ಗಟ್ಟಲೆ ಅರಣ್ಯ ಪ್ರದೇಶ ಶೋಷಣೆಗೊಳಗಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ನೀತಿಗಳ ತಿಳುವಳಿಕೆ ವಿದ್ಯಾರ್ಥಿಗಳಲ್ಲಿ ಮೂಡಿಸಲು ಗ್ರೀನ್ ಪಾರ್ಲಿಮೆಂಟ್ ಕಾರ್ಯಕ್ರಮ ಬಹಳ ಅಗತ್ಯ ಎಂದರು.


ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಕಾಶ್ ನೆತಾಲ್ಕರ್ ಮಾತನಾಡಿ, ಅರಣ್ಯ ನೀತಿ ಹಾಗೂ ಪರಿಸರ ಸೂಕ್ಶ್ಮ ಪ್ರದೇಶಗಳ ಅರಿವು ವಿದ್ಯಾರ್ಥಿಗಳಿಗೆ ಅಗತ್ಯ. ವನ್ಯಜೀವಿ ಸಂರಕ್ಷಣೆಯ ಹೊಣೆಗಾರಿಯೂ ಪ್ರತಿಯೊಬ್ಬರಲ್ಲಿರಬೇಕು ಎಂದರು.  


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಸಂಸತ್ತಿನಲ್ಲಿ ವಿರೋಧ ಮಾಡಬೇಕಾದನ್ನು ಸಮರ್ಥವಾಗಿ ವಿರೋಧಿಸಿ, ಉತ್ತಮ ವಿಚಾರಗಳಿಗೆ ಶಕ್ತಿ ತುಂಬಿ ಮಾತನಾಡಬೇಕು. ಆರೋಗ್ಯಪೂರ್ಣ ಚರ್ಚೆಯಿಂದ ಸಮಾಜಕ್ಕೆ ಹಾಗೂ ಪರಿಸರಕ್ಕೆ ಒಳಿತಾಗುತ್ತದೆ. 'ಡೀಮ್ಡ್ ಫಾರೆಸ್ಟ್' ಎಂದು ಪರಿಗಣಿಸಲಾಗುವ ಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಅರಣ್ಯ ಸಂಪತ್ತಿನ ಸಂರಕ್ಷಣೆಯಾಗಿದೆ ಎಂಬುದರ ಪ್ರಾಯೋಗಿಕ ಅಧ್ಯಯನ ಆಗಬೇಕು ಎಂದರು. 


ಉದ್ಘಾಟನಾ ಸಮಾರಂಭದ ಬಳಿಕ ಸ್ಪೀಕರ್ ಸಾತ್ವಿಕ್ ಅವರ ನಿರ್ದೇಶನದಲ್ಲಿ ಅಣಕು ಸಂಸತ್ತು ಅಧಿವೇಶನ ನಡೆಯಿತು. ಸಂಸತ್ತಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಅರಣ್ಯ ನೀತಿಯ ಕುರಿತು ಚರ್ಚಿಸಲಾಯಿತು.  ಕಾರ್ಯಕ್ರಮದಲ್ಲಿ ಡೆಪ್ಯುಟಿ ಅರಣ್ಯ ಸಂರಕ್ಷಣಾಧಿಕಾರಿ ಪಿ. ರುತ್ರನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.


ಬಿರುಸಿನ ಚರ್ಚೆಗೆ ಸಾಕ್ಷಿಯಾದ ಗ್ರೀನ್ ಪಾರ್ಲಿಮೆಂಟ್:

ಪ್ರಶ್ನೋತ್ತರ ಸುತ್ತಿನಲ್ಲಿ ನಗರಾಭಿವೃದ್ಧಿ, ಪಶು ಸಂಗೋಪನೆ, ರಕ್ಷಣಾ ಸಚಿವಾಲಯ, ಹಣಕಾಸು, ನೀರಾವರಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸಲಾಯಿತು. 


ಆರಣ್ಯ ಇಲಾಖೆಯ ಶಸ್ತ್ರಾಸ್ತ್ರಗಳು ಉತ್ತಮ ದರ್ಜೆಯದ್ದಾಗಬೇಕೆಂಬ ಬೇಡಿಕೆಗಳನ್ನು ಸದನದ ಮುಂದಿರಿಸಲಾಯಿತು. ವನ್ಯಜೀವಿಗಳು ಓಡಾಡುವ ಕಾರಿಡಾರ್ ಪ್ರದೇಶದಲ್ಲಿ ಅವುಗಳ ಸಂರಕ್ಷಣೆ ಜತೆಗೆ ಪ್ರಾಣಿಗಳಿಗೆ ಲಸಿಕೆ ಹಾಗೂ ಆಹಾರದ ಹಂಚಿಕೆ ಸಮರ್ಪಕವಾಗಬೇಕೆಂದು ವಿರೋಧ ಪಕ್ಷದಿಂದ ಒತ್ತಾಯಿಸಲಾಯಿತು. ಪಂಚಾಯತ್ ರಾಜ್ ಸಚಿವ ಇಂದುಧರ್ ಗೆ ಕಾಂಕ್ರೀಟಿಕರಣದ ಮೂಲಕ ನೈಸರ್ಗಿಕವಾಗಿರುವ ನಾಗಬನದ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದರಿಂದ ಪರಿಸರ ನಾಶವಾಗುವ ಕುರಿತು ಕೇಳಿದ ಪ್ರಶ್ನೆಗೆ, ಹಾವುಗಳ ಸಂರಕ್ಷಣೆಯೊಂದಿಗೆ ಅರಣ್ಯ ರಕ್ಷಣೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು


ಬಜೆಟ್ ಹಂಚಿಕೆಯಲ್ಲಿ ಹಿಂದಿನ ಸರಕಾರ ವಿಫಲವಾಗಿದೆ ಎಂದು ಹೇಳುವುದರ ಮೂಲಕ ವಿರೋಧ ಪಕ್ಷದ ಸಂಸದ ಅರುಣ್ ನಗೆಪಾಟಲಿಗೀಡಾದರು.

ಅಭಿವೃದ್ಧಿ ಹಾಗೂ ಅರಣ್ಯ ನಾಶದ ವಿಚಾರಗಳು ಸಂಸತ್ತಿನಲ್ಲಿ ಬಿರುಸಿನ ಚರ್ಚೆಗೆ ಕಾರಣವಾಯಿತು. ರಸ್ತೆಯ ಅಗಲೀಕರಣದಿಂದ ಆಗುತ್ತಿರುವ ತೀವ್ರ ಅರಣ್ಯ ನಾಶದ ಕುರಿತು ಎರಡು ಪಕ್ಷಗಳಿಂದ ವಿವಿಧ ದೃಷ್ಟಿಕೋನದ ಅಭಿಪ್ರಾಯಗಳು ಕೇಳಿ ಬಂತು. ಸಂಸದ  ವರುಣ್ ನಾಶವಾಗುವ ಹೆರಿಟೇಜ್ ಸಸ್ಯವರ್ಗ ಹಾಗೂ ಇತರ ಸಸ್ಯಪ್ರಭೇದಗಳನ್ನು ಕೃತಕ ವಿಧಾನದ ಮೂಲಕ ಸಸ್ಯಶಾಸ್ತ್ರೀಯ ಪ್ರಯೋಗಾಲಯಗಳಲ್ಲಿ ಬೆಳೆಸುವ ಕುರಿತು ವಿಷಯ ಮಂಡಿಸಿದರು. ಸಸ್ಯಗಳ ಸ್ಥಳಾಂತರ, ಫ್ಲೈ ಓವರ್ ನಿರ್ಮಾಣ ಜತೆಗೆ ಮರಗಳಲ್ಲಿ ಸುರಂಗ ಕೊರೆಯುವ ವಿದೇಶಿ ಮಾದರಿ ಆಲೋಚನೆಗಳನ್ನೂ ಪ್ರಸ್ತಾಪಿಸಲಾಯಿತು.


ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಶಿಕ್ಷಣದ ಜತೆಗೆ ಸಸ್ಯಗಳನ್ನು ನೆಡುವ ಅರಿವನ್ನು ಹಿರಿಯರು ಮೂಡಿಸಬೇಕು. ಭಾಷಣ, ಪ್ರಬಂಧಗಳಂತಹ ಸ್ಪರ್ಧೆಗಳ ಮೂಲಕ ಮೂಡಿಸುವ ಜಾಗೃತಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದೆ ಇರುವುದರಿಂದ ಸಸ್ಯಗಳನ್ನು ನೆಟ್ಟು ಬೆಳಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಅಂಕ ಪಟ್ಟಿಯಲ್ಲಿ ನಮೂದಿಸಿ ಅದಕ್ಕನುಗುಣವಾಗಿ ಸ್ಕಾಲರ್ ಶಿಪ್ ಒದಗಿಸುವುದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು.


ಅರಣ್ಯ ಇಲಾಖೆ ಸಚಿವೆ ಇಂದ್ರಜ ಜೈವಿಕ ವೈವಿಧ್ಯ ಅಧಿನಿಯಮ 2002, ಮಸೂದೆ ಮಂಡಿಸಿದರು.   ಮಸೂದೆಯ ಹೆಸರನ್ನು ಬದಲಿಸಿ ಪ್ರಾದೇಶಿಕ ಪ್ರತಿನಿಧಿಗಳ ನೇಮಕ ಪ್ರಕ್ರಿಯೆಯ ಉಲ್ಲೇಖ ಮಾಡಬೇಕು. ಔಷಧೀಯ ಸಸ್ಯಗಳ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳನ್ನು ವಾಣಿಜ್ಯ ಬಳಕೆಗೆ ಬಳಸುವ ವಿಚಾರಗಳ ಕುರಿತು ಸ್ಪಷ್ಟವಾದ ಮಾಹಿತಿ, ಜೀವವೈವಿದ್ಯತೆಯ ದಾಖಲೀಕರಣದ ಮರುಪರಿಶೀಲನೆ ಹಾಗೂ ಮಸೂದೆಗೆ ಅಗತ್ಯವಿರುವ ನಿಧಿಯ ಹಂಚಿಕೆಯ ವಿವರಗಳನ್ನು ನೀಡಿ ತಿದ್ದುಪಡಿ ಮಾಡಬೇಕೆಂಬ ಅಭಿಪ್ರಾಯವನ್ನು ವಿರೋಧ ಪಕ್ಷದ ನಾಯಕಿ ಪ್ರಜ್ಞಾ ವ್ಯಕ್ತಪಡಿಸಿದರು. ಬಹಳಷ್ಟು ಪರ ವಿರೋಧದ ನಂತರ 3 ತಿದ್ದುಪಡಿಗಳಿಗೆ ಅನುಮೋದನೆ ದೊರೆತು ಜೈವಿಕ ವೈವಿಧ್ಯ ಅಧಿನಿಯಮ ಮಸೂದೆ 2002ನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಲಾಯಿತು.  


ಸಂಸತ್ತಿನ ಕಲಾಪದ ಸಂದರ್ಭ ಸದನದ ಸಚಿವರೊಬ್ಬರು 'ಹುಚ್ಚು' ಎಂಬ ಪದ ಬಳಕೆ ಮಾಡಿ ಸಂಸತ್ತಿನ ಗೌರವಕ್ಕೆ ಚ್ಯುತಿ ಬರುವಂತೆ ಮಾಡಿದ ಕಾರಣ ಕ್ಷಮೆ ಯಾಚಿಸುವ ಪ್ರಸಂಗವೂ ನಡೆಯಿತು.


ಸಂಸತ್ತಿನಲ್ಲಿ ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು, ಆಳ್ವಾಸ್ ಇಂಜಿನಿಯರಿಂಗ್, ನ್ಯಾಚುರೋಪತಿ, ಆಯುರ್ವೇದ ಕಾಲೇಜು, ಉಜಿರೆಯ ಎಸ್ ಡಿ ಎಂ ಕಾಲೇಜು, ಕಾಲೇಜ್ ಆಫ್ ಫಾರೆಸ್ಟ್ರಿ, ಪೊನ್ನಂಪೇಟೆ ಹಾಗೂ ಕಾಲೇಜ್ ಆಫ್ ಫಾರೆಸ್ಟ್ರಿ ಶಿರಸಿ ಸೇರಿದಂತೆ ರಾಜ್ಯದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೊಸ್ಟ್ರಮ್ ಕ್ಲಬ್ ನ ಸದಸ್ಯೆಯರಾದ  ಗ್ರೇಶಲ್ ಕಲಿಯಾಂಡ, ಪ್ರಿಯಾಂಕ ಪೂಜಾರ್ ಸೆಕ್ರೆಟರಿಗಳಾಗಿ ಸಹಕರಿಸಿದರು.


ಮಂಗಳೂರು ಸರ್ಕಲ್ ಅರಣ್ಯಾಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ಸಿಬ್ಬಂದಿಗಳು, ವಿವಿಧ ಉಪನ್ಯಾಸಕರು ಉಪಸ್ಥಿತರಿದ್ದರು. ಅಣಕು ಸಂಸತ್ತಿನ ಕಲಾಪದ ಬಳಿಕ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆಯಲ್ಲಿ ಗ್ರೀನ್ ಪಾರ್ಲಿಮೆಂಟ್ -2021 ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post