ಮಂಗಳೂರು: ನಗರದ ಲ್ಯಾಂಡ್‌ಲಿಂಕ್ಸ್ ಬಡಾವಣೆಗೆ ಮಂಜೂರಾಗಿರುವ ಕೆಎಸ್ಸಾರ್ಟಿಸಿ ಸಿಟಿ ಬಸ್ ಬುಧವಾರ ಬೆಳಗ್ಗೆ ಅಧಿಕೃತವಾಗಿ ಬಡಾವಣೆಯ ಒಳಗಿನ ಕೊನೆಯ ಬಸ್ ನಿಲ್ದಾಣದಲ್ಲಿ ಉದ್ಘಾಟನೆಯಾಗಬೇಕಿತ್ತು. ಆದರೆ ಕೊನೇಕ್ಷಣದಲ್ಲಿ ಸ್ಥಳೀಯ ಶಾಸಕರೇ ಜನರಿಗೆ ದೊರೆತ ಸೌಲಭ್ಯಕ್ಕೆ ಕತ್ತರಿ ಹಾಕಿದರೇ ಎಂಬ ಪ್ರಶ್ನೆ ಇಲ್ಲಿ ನಿವಾಸಿಗಳಲ್ಲಿ ಮೂಡಿದೆ.
ಈ ಬಸ್ ಸೌಲಭ್ಯ ದೊರೆಯುವಲ್ಲಿ ಶಾಸಕರ ಪ್ರಯತ್ನವೇನೂ ಇಲ್ಲ. ಆದರೆ ಮಂಜೂರಾಗಿ ಸೋಮವಾರ ಬೆಳಗ್ಗೆ ಒಂದು ಪ್ರಾಯೋಗಿಕ ಟ್ರಿಪ್ ಓಡಿದ ಬಸ್ಸನ್ನು ಸ್ಥಗಿತಗೊಳಿಸುವಲ್ಲಿ ಮಾತ್ರ ಅವರ ಕೈವಾಡ ಎದ್ದು ಕಾಣುವಂತಿದೆ.
ಇದು ಈ ಸಂಜೆಯ ಬೆಳವಣಿಗೆ. ನಿನ್ನೆ ಪ್ರಾಯೋಗಿಕ ಟ್ರಿಪ್ ಓಡಿದ ಬಸ್ ಲ್ಯಾಂಡ್‌ಲಿಂಕ್ಸ್ ಬಡಾವಣೆಯ ಅಂದಾಜು 20,000 ನಿವಾಸಿಗಳ ಮನದಲ್ಲಿ ಸಂತಸ ಮೂಡಿಸಿತ್ತು. ಬಹು ವರ್ಷಗಳ ಬೇಡಿಕೆ ಈಗಲಾದರೂ ಈಡೇರಿತಲ್ಲಾ ಎಂಬ ಸಂತೋಷವಿತ್ತು. ಆದರೆ ಈಗ ದೊರೆತಿರುವ ಖಚಿತ ಮಾಹಿತಿಗಳ ಪ್ರಕಾರ, ಈ ಬಸ್ ನ ಓಡಾಟ ನಾಳೆ ಉದ್ಘಾಟನೆಗೊಳ್ಳುವುದಿಲ್ಲ.
ಖಾಸಗಿ ಬಸ್ಸಿನವರು ಬಸ್ ಓಡಿಸ್ತಾರಂತೆ, ಅವರಿಗೆ ಇನ್ನೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬಂತಹ ಅಂತೆ ಕಂತೆಯ, ಹಾರಿಕೆಯ ಸಮಜಾಯಿಷಿಗಳು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಕೇಳಿ ಬಂದಿದೆ.
ಕೊರೊನಾ ಎರಡನೇ ಅಲೆಯ ಅವಧಿಯಲ್ಲಿ ಕಳೆದ ನಾಲ್ಕಾರು ತಿಂಗಳುಗಳಿಂದ ಲ್ಯಾಂಡ್ ಲಿಂಕ್ಸ್ ಬಡಾವಣೆಗೆ ಮೊದಲು ಬರುತ್ತಿದ್ದ ಖಾಸಗಿ ಬಸ್ ಕೂಡ ಬರುತ್ತಿರಲಿಲ್ಲ. ಬಡಾವಣೆಗೆ ಮಂಜೂರಾದ ಬಸ್‌ನ ರೂಟ್ ಸಂಖ್ಯೆ 33ಸಿ. ಆದರೆ ಈಗ ಕೆಲವು ದಿನಗಳಿಂದ ನೆನಪಾದಾಗ ಒಮ್ಮೊಮ್ಮೆ ಬರುವ ಖಾಸಗಿ ಬಸ್‌ನಲ್ಲಿ ನಮೂದಾಗಿರುವ ರೂಟ್ ಸಂಖ್ಯೆ 17 ಬಿ. ಈ ಬಸ್ಸಿಗೆ ಲ್ಯಾಂಡ್‌ಲಿಂಕ್ಸ್ ಒಳಗೆ ಬರಲು ಅನುಮತಿ ಕೊಟ್ಟ ಪ್ರಾಧಿಕಾರ ಯಾವುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಕೆಎಸ್ಸಾರ್ಟಿಸಿ ಸಿಟಿ ಬಸ್ ಬರುತ್ತದೆ ಎಂದಾಗಲೆಲ್ಲ ಎದ್ದು ನಿಲ್ಲು ಖಾಸಗಿ ಬಸ್ ಲಾಬಿಗಳು ಮತ್ತು ಅದಕ್ಕೆ ಮಣಿಯುವ ಶಾಸಕರು- ಇವರ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶ ಮಡುಗಟ್ಟುತ್ತಿದೆ. ಸರಕಾರಿ ಸಿಟಿ ಬಸ್‌ಗೆ ಬಡಾವಣೆಯ ಒಳಗೆ ಬರುವಂತಿಲ್ಲ ಎಂದಾದರೆ ಖಾಸಗಿ ಬಸ್ ಬರುವುದೂ ಬೇಕಿಲ್ಲ ಎನ್ನುವವರು ಬಹಳ ಮಂದಿ ಇಲ್ಲಿದ್ದಾರೆ.
ಬಡಾವಣೆಯ ಒಳಗೆ ಖಾಸಗಿ ಬಸ್ ಬಾರದೆ ಕೈಕೊಟ್ಟಾಗಲೂ ಇಲ್ಲಿನ ಪ್ರಯಾಣಿಕರು ಒಂದೂವರೆ ಕಿ.ಮೀ ದೂರದ ಮುಖ್ಯರಸ್ತೆಗೆ ನಡೆದುಕೊಂಡೇ ಹೋಗಿ ಕೊಂಚಾಡಿ ಕಟ್ಟೆಯಿಂದ ಬಸ್ ಹತ್ತಿ ತಮ್ಮ ಗಮ್ಯ ಸ್ಥಾನ ತಲುಪುತ್ತಿದ್ದರು. ಈಗ ಸರಕಾರಿ ಸಿಟಿ ಬಸ್ ಬರುತ್ತದೆ ಎಂದಾಗ ಅದಕ್ಕೆ ಅಡ್ಡಗಾಲು ಹಾಕುವ ಮೂಲಕ ಮತ್ತೊಮ್ಮೆ ಖಾಸಗಿ ಲಾಬಿ ಮತ್ತು ಶಾಸಕರು ಇಲ್ಲಿನ ಜನತೆಗೆ ದ್ರೋಹವೆಸಗಿದ್ದಾರೆ ಎಂದರೆ ತಪ್ಪಾಗದು.
ಒಂದು ವೇಳೆ ಶಾಸಕ ಡಾ. ಭರತ್ ಶೆಟ್ಟಿ ಅವರು ಇದರಲ್ಲಿ ತಮ್ಮ ಕೈವಾಡವೇನೂ ಇಲ್ಲ ಎನ್ನುವುದಾದರೆ ನಾಳೆ ಬೆಳಗ್ಗೆ ಹೊಸ ಸರಕಾರಿ ಸಿಟಿ ಬಸ್ ಉದ್ಘಾಟನೆಗೊಳ್ಳಲಿ ಅಥವಾ ಉದ್ಘಾಟನೆ ಇಲ್ಲದೆಯೇ ಓಡಾಟ ಆರಂಭಿಸಲಿ. ಆಗ ಮಾತ್ರ ಶಾಸಕರು ತಮ್ಮನ್ನು ಗೆಲ್ಲಿಸಿದ ಜನರ ಭಾವನೆಯಲ್ಲಿ ದೋಷಮುಕ್ತರು ಅನಿಸಿಕೊಳ್ಳಬಹುದು.
ಲ್ಯಾಂಡ್‌ಲಿಂಕ್ಸ್ ಬಡಾವಣೆಯಿಂದ ಬಜಾಲ್ ಪಡ್ಪು ವರೆಗೆ ಮಂಜೂರಾದ ಹೊಸ ಮಾರ್ಗಸೂಚಿಯಲ್ಲಿ ಎರಡು ಬಸ್‌ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿತ್ತು. ಅದಕ್ಕೆ ಅಗತ್ಯ ಅನುಮತಿಗಳನ್ನೂ ಪಡೆದುಕೊಂಡು ಬಸ್ಸಿನ ಟ್ರಯಲ್ ರನ್ ಕೂಡ ಆರಂಭವಾಗಿತ್ತು. ಇದೀಗ ದಿಢೀರನೆ ಬಸ್ ಬರುವುದಿಲ್ಲ ಎಂಬ ಸುದ್ದಿಗಳು ಬಡಾವಣೆಯ ನಿವಾಸಿಗಳಿಗೆ ತೀವ್ರ ಅಸಮಾಧಾನ ಹುಟ್ಟುಹಾಕಿದೆ.
ನಿನ್ನೆಯಷ್ಟೇ ಬೋಳೂರಿನ ಅಮೃತಾನಂದಿಮಯಿ ಮಠದ ಸಮೀಪದಿಂದ ಕಂಕನಾಡಿ ರೈಲು ನಿಲ್ದಾಣಕ್ಕೆ ಸರಕಾರಿ ಸಿಟಿ ಬಸ್ ಸಂಚಾರ ಉದ್ಘಾಟನೆಗೊಂಡಿತ್ತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಪಟ್ಟು ಬಿಡದೆ ಬಸ್ ಸಂಚಾರವನ್ನು ಉದ್ಘಾಟಿಸಿಯೇ ಬಿಟ್ಟಿದ್ದರು. ಅವರಿಗೆ ಅಲ್ಲಿ ಜನಹಿತವೇ ಮುಖ್ಯವಾಗಿತ್ತು.
ಆದರೆ ಅವರ ಕೌಂಟರ್‌ಪಾರ್ಟ್, ಮಂಗಳೂರು ಉತ್ತರದ ಶಾಸಕ ಡಾ ಭರತ್ ಶೆಟ್ಟಿ ಅವರಿಗೆ ಇನ್ಯಾರದೋ ಹಿತ ಮುಖ್ಯವಾಗಿ ಸರಕಾರಿ ಸಿಟಿ ಬಸ್ಸನ ಸೌಲಭ್ಯಕ್ಕೆ ಕತ್ತರಿ ಹಾಕಿದ್ದಾರೆ.
ಲ್ಯಾಂಡ್‌ಲಿಂಕ್ಸ್ ಬಡಾವಣೆಗೆ ಪ್ರಾಯೋಗಿಕ ಟ್ರಿಪ್‌ನಲ್ಲಿ ಸರಕಾರಿ ಸಿಟಿ ಬಸ್ ಬಂದಾಗಲೇ ಉಪಯುಕ್ತ ನ್ಯೂಸ್ ಆ ಸುದ್ದಿ ಪ್ರಕಟಿಸಿತ್ತು. ಅದರ ಸಂಬಂಧ ಹೆಚ್ಚಿನ ವಿವರ ತಿಳಿಯಲು ಕೆಎಸ್ಸಾರ್ಟಿಸಿಯ ವಿಭಾಗೀಯ ಸಂಚಾರ ನಿಯಂತ್ರಕರಿಗೆ (ಡಿಸಿ) ಕರೆ ಮಾಡಿ ಸಂಪರ್ಕಿಸಲು ಯತ್ನಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಕೆಎಸ್ಸಾರ್ಟಿಸಿ ಡಿಸಿಯವರೇ ಮರಳಿ ಕರೆ ಮಾಡಿ ಬಸ್‌ನ ಅಧಿಕೃತವಾಗಿ ನಾಳೆಯಿಂದ ಆರಂಭವಾಗುತ್ತದೆ ಎಂದು ಹೇಳಿದ್ದರು.
ಆದರೆ ಈಗ ಅವರಿಂದಲೇ ಬರುವ ಉತ್ತರ, ತಾಂತ್ರಿಕ ದೋಷವಿದೆ, ಅದು ಸರಿಯಾದ ಕೂಡಲೇ ಬಸ್ ಆರಂಭವಾಗುತ್ತದೆ ಎಂದು. ನಿನ್ನೆ ಇರದ ತಾಂತ್ರಿಕ ದೋಷ ಇಂದು ಸಂಜೆಯ ವೇಳೆಗೆ ಎಲ್ಲಿಂದ ಬಂತು? ಒಂದು ವೇಳೆ ನಿಜವಾದ ಅರ್ಥದಲ್ಲಿ ಬಸ್‌ನಲ್ಲಿ ತಾಂತ್ರಿಕ ದೋಷ ಇರುವುದಾದರೆ ದುರಸ್ತಿ ಮಾಡಿ ಕಳುಹಿಸಿದರಾಯ್ತು ಅಷ್ಟೆ. ಅದಕ್ಕೆ ಕೆಸ್ಸಾರ್ಟಿಸಿ ಡಿಪೋದಲ್ಲೇ ವ್ಯವಸ್ಥೆ ಇದೆಯಲ್ಲವೇ?
ತಾಂತ್ರಿಕ ದೋಷದ ಕಾರಣ ಹೇಳಿ ಜನರಿಗೆ ದೊರೆತ ಸೌಲಭ್ಯಕ್ಕೂ ಕತ್ತರಿ ಹಾಕುವಂತಹ ಒತ್ತಡ ಅವರ ಮೇಲೆ ಬಂದಿದ್ದು ಹೇಗೆ ಮತ್ತು ಯಾರಿಂದ? ಯಾವುದೇ ಮೂಲಗಳನ್ನು ವಿಚಾರಿಸಿ, ಯಾವುದೇ ರೀತಿಯ ತರ್ಕಗಳಿಗೆ ಒಳಪಡಿಸಿದರೂ ಸಂದೇಹದ ಮುಳ್ಳು ಶಾಸಕರ ಕಡೆಗೇ ಸೂಚಿಸುತ್ತಿದೆ.
ಮಾಜಿ ಸಚಿವರು, ಲ್ಯಾಂಡ್‌ಲಿಂಕ್ಸ್ ಬಡಾವಣೆಯ ನಿರ್ಮಾತೃಗಳೂ ಆದ ಜೆ. ಕೃಷ್ಣ ಪಾಲೆಮಾರ್ ಅವರು ಅಧಿಕಾರದಲ್ಲಿದ್ದಾಗ ಬಡಾವಣೆಯ ಒಳಗೆ ಎರಡು ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಿತ್ತು. ಸ್ವಲ್ಪ ಕಾಲ ಎರಡೂ ಬಸ್‌ಗಳು ಓಡಾಟ ನಡೆಸುತ್ತಿದ್ದವು. ಕ್ರಮೇಣ ಒಂದು ಬಸ್ ನಿಂತುಹೋಗಿ, 33ಸಿ ಬಸ್ ಮಾತ್ರ ಸಂಚಾರ ನಡೆಸುತ್ತಿತ್ತು. ಅದೂ ಸಹ ಆಗಾಗ್ಗೆ ಕೆಟ್ಟು ಹೋಗಿ ಕೈಕೊಡುವ ಸಂದರ್ಭಗಳೇ ಹೆಚ್ಚಾಗಿದ್ದವು.
ಹಾಲಿ ಶಾಸಕ ಭರತ್ ಶೆಟ್ಟಿ ಅವರು ಕಳೆದ ಚುನಾವಣೆಯಲ್ಲಿ ಗೆದ್ದು ಬರಲು ಲ್ಯಾಂಡ್ಲಿಂಕ್ಸ್ ಬಡಾವಣೆಯ ಮತದಾರರು ಬಹಳ ದೊಡ್ಡ ಪಾತ್ರವಹಿಸಿದ್ದಾರೆ. ಆದರೆ ಗೆದ್ದು ಬಂದ ನಂತರ ಅವರು ಈ ಬಡಾವಣೆಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.
ಬಡಾವಣೆಯ ಒಳಗಿನ ರಸ್ತೆಗಳು ಕೆಟ್ಟುಹೋಗಿದ್ದರೂ ಶಾಸಕರಾಗಿ (ಅದು ಕಾರ್ಪೊರೇಟರ್ ಕೆಲಸ ಎಂದು ಹೇಳಿ ನುಣುಚಿಕೊಳ್ಳಬಹುದು. ಅದು ಬೇರೆ ಮಾತು) ಅವರ ಪಾತ್ರ ಏನೂ ಇಲ್ಲವೆಂದು ಈಗ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕರು ತಮ್ಮ ಮೇಲಿನ ಆರೋಪ ಅಥವಾ ಸಂದೇಹಗಳನ್ನು ಕಳಚಿಕೊಂಡು ಬಡಾವಣೆಯ ಮತದಾರರು ಮತ್ತು ನಿವಾಸಿಗಳ ದೃಷ್ಟಿಯಲ್ಲಿ ದೋಷಮುಕ್ತರಾಗಬೇಕಾದರೆ ನಾಳೆ ಸರಕಾರಿ ಸಿಟಿ ಬಸ್ ಆರಂಭವಾಗಲೇಬೇಕು. ಇದು ಬಡಾವಣೆಯ ನಿವಾಸಿಗಳೆಲ್ಲರ ಹಕ್ಕೊತ್ತಾಯ. ನಿವಾಸಿಗಳು ಶಾಸಕರಿಗೆ ಅಥವಾ ಅವರ ಸಹಾಯಕರಿಗೆ ಕರೆ ಮಾಡಿ ವಿಚಾರಿಸಿಕೊಳ್ಳಬಹುದು.
ಅವರ ಮೊಬೈಲ್ ಸಂಖ್ಯೆ: 98454 88411
Post a Comment