ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮೂಡಬಿದಿರೆ ಘಟಕಕ್ಕೆ ತಾತ್ಕಾಲಿಕವಾಗಿ ‘ಗೃಹ’ (ಕೊಠಡಿ) ಒದಗಿಸುವ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಸೂಚನೆಯಂತೆ ತಹಶೀಲ್ದಾರ್ ಪುಟ್ಟರಾಜು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ.
ಗೃಹರಕ್ಷಕ ಘಟಕಕ್ಕೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಹಾಗೂ ಅಲ್ಲಿಯವರೆಗೆ ತಾತ್ಕಾಲಿಕವಾಗಿ ಕೊಠಡಿಯನ್ನು ಒದಗಿಸುವಂತೆ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಮಂಗಳವಾರ ಸಲ್ಲಿಸಿದ ಮನವಿಗೆ ಶಾಸಕರು ತಕ್ಷಣ ಸ್ಪಂದಿಸಿ ತಹಶೀಲ್ದಾರ್ ಕಛೇರಿಯ ಹಿಂದುಗಡೆ ಖಾಲಿ ಇರುವ ಸರಕಾರಿ ಕಟ್ಟಡದಲ್ಲಿ ಕೊಠಡಿ ನೀಡುವಂತೆ ಶಾಸಕರು ತಹಶೀಲ್ದಾರರಿಗೆ ಸೂಚಿಸಿದರು ಹಾಗೂ ಕಟ್ಟಡ ನಿರ್ಮಾಣದ ಅನುದಾನಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಮೂಡಬಿದಿರೆ ಘಟಕದಲ್ಲಿ 43 ಗೃಹರಕ್ಷಕರಿದ್ದು, ಅದರಲ್ಲಿ 10 ಮಂದಿ ಮಹಿಳಾ ಗೃಹರಕ್ಷಕರಿದ್ದಾರೆ. ಮಾರ್ಪಾಡಿ ಗ್ರಾಮದಲ್ಲಿ ಕಡಲಕೆರೆಯ ಬಳಿ ಗೃಹರಕ್ಷಕದಳಕ್ಕೆ 10 ಸೆಂಟ್ಸ್ ಜಾಗ ಹಂಚಿಕೆಯಾಗಿದೆ. ಸ್ವಂತ ಕಟ್ಟಡ ನಿರ್ಮಾಣದ ಅನುದಾನಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಮೂಡಬಿದಿರೆ ಘಟಕಾಧಿಕಾರಿ ಪಾಂಡಿರಾಜ್ ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು. ಲಭ್ಯ ಕೊಠಡಿಯನ್ನು ಮಂಗಳವಾರವೇ ಶುಚಿಗೊಳಿಸಿ ಕಛೇರಿ ರೂಪಿಸಲು ತಹಶೀಲ್ದಾರರು ಸೂಕ್ತ ವ್ಯವಸ್ಥೆ ಮಾಡಿಸಿದರು.
Post a Comment