ದಾವಣಗೆರೆ, : ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆಯೊಂದು ದಾವಣಗೆರೆಯಲ್ಲಿ ಇಂದು ನಡೆದಿದೆ.
ಮೃತ ಪೊಲೀಸ್ ಸಿಬ್ಬಂದಿಯನ್ನು ಆರ್.ಚೇತನ್(28) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಹುಣಸಘಟ್ಟದಲ್ಲಿ ಫೈರಿಂಗ್ ಪ್ರಾಕ್ಟೀಸ್ ಮುಗಿಸಿ ವಾಪಾಸ್ಸಾಗಿದ್ದ ಚೇತನ್ ಬಳಿಕ ಡಿ.ಆರ್.ಶಸ್ತ್ರಾಗಾರದಲ್ಲಿ ಬಂದೂಕು ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಚ್ಛಗೊಳಿಸುತ್ತಿದ್ದ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ಚೇತನ್ ಅವರ ಕುತ್ತಿಗೆಯನ್ನು ಹೊಕ್ಕಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿಯಾಗಿದ್ದ ಚೇತನ್ ಅವರು ಡಿ.ಆರ್.ಪೊಲೀಸ್ ಪೇದೆಯಾಗಿ 2012ರಲ್ಲಿ ಸೇವೆಗೆ ಸೇರಿದ್ದರು.
Post a Comment