ಕೊಯಮತ್ತೂರು: ಎರಡು ತಿಂಗಳ ಹಸುಗೂಸು ಸ್ನಾನ ಮಾಡಿಸುವ ವೇಳೆಯಲ್ಲಿ ಬಕೆಟೊಳಕ್ಕೆ ಬಿದ್ದು ಮೃತ ಪಟ್ಟಿರುವ ದಾರುಣ ಘಟನೆಯೊಂದು ಕೊಯಮತ್ತೂರಿನ ಅಂಬಲ್ ನಗರದಲ್ಲಿ ನಡೆದಿದೆ.
ಮಗುವಿನ ಎರಡೂವರೆ ವರ್ಷ ಪ್ರಾಯದ ಸಹೋದರಿ ಸ್ನಾನ ಮಾಡಿಸುವ ವೇಳೆಯಲ್ಲಿ ಈ ಘಟನೆ ನಡೆದಿದೆ.
ಎರಡು ಮಕ್ಕಳ ತಾಯಿ ಪ್ರೇಮಾ ಬಟ್ಟೆ ಒಗೆಯಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರ ಎರಡೂವರೆ ವರ್ಷದ ಮಗಳು ಮಗುವನ್ನು ಆಟವಾಡಿಸುತ್ತಿದ್ದಳು. ಆಗ ಅಮ್ಮನಿಗೆ ತಿಳಿಯದಂತೆಯೇ ಹಸುಗೂಸನ್ನು ಎತ್ತಿಕೊಂಡು ಸ್ನಾನ ಮಾಡಿಸಲು ಹೋಗಿದ್ದಳು.
ಪ್ರತಿದಿನ ಮಗುವಿಗೆ ಅಮ್ಮ ಸ್ನಾನ ಮಾಡಿಸುವುದನ್ನು ನೋಡುತ್ತಿದ್ದ ಮಗಳು ತಾನೂ ಮಗುವಿಗೆ ಸ್ನಾನ ಮಾಡಿಸುವುದಾಗಿ ಕೇಳುತ್ತಿತ್ತು. ಆದರೆ ಪ್ರೇಮಾ ನಿರಾಕರಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ಅಮ್ಮ ಇಲ್ಲದ ವೇಳೆ ಮಗುವನ್ನು ಕೈಗೆತ್ತಿಕೊಂಡು ತಾನೇ ಸ್ನಾನ ಮಾಡಿಸಲು ತೆರಳಿದ್ದಳು ಎಂದು ತಾಯಿ ತಿಳಿಸಿದ್ದಾರೆ.
ತಾಯಿ ಪ್ರೇಮಾ ಮನೆಯೊಳಕ್ಕೆ ಬರುವಷ್ಟರಲ್ಲಿ ಮಗಳು ಬಕೆಟ್ ಒಳಗಿಂದ ಮಗುವನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದಳು.
ಬೇಗನೆ ಧಾವಿಸಿ ಪ್ರೇಮಾ ಮಗುವನ್ನು ಎತ್ತಿಕೊಂಡು ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿ ಆಸ್ಪತ್ರೆಗೆ ಬಂದಿದ್ದರು. ಆದರೆ ಅಷ್ಟು ಹೊತ್ತಿಗಾಗಲೇ ಮಗು ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
Post a Comment