ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಅರ್ಥಧಾರಿ- ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ನಿಧನ

ಹಿರಿಯ ಅರ್ಥಧಾರಿ- ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ನಿಧನ



ಮಂಗಳೂರು: ಯಕ್ಷಗಾನದ ಹಿರಿಯ ಅರ್ಥಧಾರಿ, ಪ್ರಗತಿಪರ ಕೃಷಿಕ ಕುತ್ಲೋಡಿ ವಾಸು ಶೆಟ್ಟಿ (1931- 2021) ಸೋಮವಾರ (ಜುಲೈ 26, 2021) ಸಾಯಂಕಾಲ ಸಿದ್ಧಕಟ್ಟೆ ಸಮೀಪದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತ: ಕೃಷಿಕರಾಗಿದ್ದ ಅವರು ಎಳವೆಯಿಂದಲೇ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪಳಗಿ ಪ್ರಸಿದ್ಧರ ಕೂಟಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಸ್ಥಳೀಯವಾಗಿ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ತಾಳಮದ್ದಳೆ ಕ್ಷೇತ್ರದ ಜನಪ್ರಿಯ ಅರ್ಥಧಾರಿ ಮತ್ತು ಹೆಸರಾಂತ ವೇಷಧಾರಿ ದಿ.ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಅವರನ್ನು ಗುರುವಾಗಿ ಪರಿಭಾವಿಸಿದ್ದರು. ಚೆನ್ನಪ್ಪ ಶೆಟ್ಟರ ಅಂತ್ಯಕ್ರಿಯೆಯಲ್ಲಿ ಅವರ ಉಭಯ ಗುರುಗಳಾದ ದಿ.ಶಿಮಂತೂರು ನಾರಾಯಣ ಶೆಟ್ಟರು ಹಾಗೂ ವಾಸು ಶೆಟ್ಟರು ಭಾಗವಹಿಸಿದ್ದು ವಿಶೇಷ.  


ವಿಪುಲವಾದ ಪುರಾಣ ಜ್ಞಾನ ಹಾಗೂ ಯಕ್ಷಗಾನ ಪ್ರಸಂಗಗಳ ಸಮಗ್ರ ಮಾಹಿತಿ ಹೊಂದಿದ್ದ ವಾಸು ಶೆಟ್ಟರು ಭೀಷ್ಮ, ಕರ್ಣ, ಕೌರವ, ವಾಲಿ, ಮಾಗಧ, ರಾಮ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಹಾಗೆಯೇ ಹಳೆ ತಲೆಮಾರಿನ ಹಾಗೂ ಈಗಿನ ಅನೇಕ ಪ್ರಮುಖ ಕಲಾವಿದರ ಸಂಪರ್ಕದಲ್ಲಿದ್ದು ತಮ್ಮ ತೊಂಭತ್ತರ ಹರೆಯದಲ್ಲೂ ಕ್ರಿಯಾಶೀಲರಾಗಿದ್ದರು. ಮಂಗಳೂರಿನ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ಕೊಡಮಾಡುವ 'ಪೊಳಲಿ ಶಾಸ್ತ್ರಿ ಪ್ರಶಸ್ತಿ' ಸೇರಿದಂತೆ ಕೆಲವು ಸನ್ಮಾನ ಗೌರವಗಳನ್ನು ಅವರು ಪಡೆದಿದ್ದಾರೆ. ಇದೀಗ ಅಲ್ಪಕಾಲದ ಅಸ್ವಾಸ್ಥ್ಯದಿಂದ ವಯೋಸಹಜವಾಗಿ ಅಸು ನೀಗಿರುವ ಅವರು ಮಕ್ಕಳು, ಕುಟುಂಬಿಕರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ (ಮಂಗಳವಾರ) ಮುಂಜಾನೆ 10 ಗಂಟೆಗೆ ಮಾವಿನಕಟ್ಟೆ ಬಳಿಯ ಕುತ್ಲೋಡಿಯಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಯಕ್ಷಾಂಗಣ ಸಂತಾಪ:

ಯಕ್ಷಾಂಗಣ ಮಂಗಳೂರು ಆಯೋಜಿಸಿದ್ದ ಸಿದ್ಧಕಟ್ಟೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಸಪ್ತಾಹ ಕಲಾಪಗಳನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಹಿರಿಯ ವಿದ್ವಾಂಸ ಕುತ್ಲೋಡಿ ವಾಸು ಶೆಟ್ಟರ ನಿಧನಕ್ಕೆ ಯಕ್ಷಾಂಗಣದ ಪದಾಧಿಕಾರಿಗಳು ಮತ್ತು ಕಲಾವಿದ ಬಳಗದ ಪರವಾಗಿ ಯಕ್ಷಾಂಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸಂತಾಪ ಸೂಚಿಸಿದ್ದಾರೆ. ಹಿರಿಯ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ, ಸಂಘಟಕ ಶಾಂತಾರಾಮ ಕುಡ್ವ ಮೂಡಬಿದಿರೆ, ಮುಂಬಯಿ ಬಂಟರವಾಣಿಯ ಅಶೋಕ ಪಕ್ಕಳ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಅವರ ಕುಟುಂಬ ವರ್ಗದವರೂ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

0 Comments

Post a Comment

Post a Comment (0)

Previous Post Next Post