ಚಾತುರ್ಮಾಸ್ಯ ಪ್ರದರ್ಶನಕ್ಕಾಗಿ ಅಲ್ಲ, ಆಚರಣೆಗಾಗಿ, ಧರ್ಮ ಪ್ರಭಾವನೆಗಾಗಿ
ಉಜಿರೆ: ಚಾತುರ್ಮಾಸ್ಯ ವ್ರತಾಚರಣೆ ಕೇವಲ ಪ್ರದರ್ಶನಕ್ಕಾಗಿ ಅಲ್ಲ. ವ್ರತ-ನಿಯಮಗಳ ಅನುಷ್ಠಾನದೊಂದಿಗೆ ಧರ್ಮದ ಆಚರಣೆ ಮತ್ತು ಧರ್ಮ ಪ್ರಭಾವನೆಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಎಂದು ಆರ್ಯಿಕಾ ಚಿಂತನಮತಿ ಮಾತಾಜಿ ಹೇಳಿದರು.
ನಾರಾವಿಯಲ್ಲಿ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ಅವರು ಚಾತುರ್ಮಾಸ್ಯ ವ್ರತಾಚರಣೆ ಉದ್ಘಾಟನೆಯೊಂದಿಗೆ ಮಂಗಲ ಕಲಶ ಸ್ಥಾಪನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವರ್ಷದ 12 ತಿಂಗಳುಗಳಲ್ಲಿ 8 ತಿಂಗಳು ವಿಹಾರದ ಮೂಲಕ ಧರ್ಮ ಪ್ರಭಾವನೆ ಮಾಡುವ ಸಾಧು-ಸಂತರು ಹಾಗೂ ಮಾತಾಜಿಯವರು 4 ತಿಂಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಆತ್ಮಕಲ್ಯಾಣಕ್ಕಾಗಿ ಚಿಂತನ-ಮಂಥನ ಮಾಡಿ ಸಮಾಜಕ್ಕೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಾರೆ. ದೇವರು, ಗುರುಗಳು ಮತ್ತು ಶಾಸ್ತ್ರದ ಆರಾಧನೆಯೊಂದಿಗೆ ಶ್ರಾವಕರು ಮತ್ತು ಶ್ರಾವಕಿಯರು ಶ್ರದ್ಧಾ-ಭಕ್ತಿಯಿಂದ ಸಾಧು-ಸಂತರ ಧರ್ಮೋಪದೇಶ ಪಡೆದು ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ತಮ್ಮ ದೈನಂದಿನ ವರ್ತನೆಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. ಸಹಿಷ್ಣುತೆ, ಇಂದ್ರಿಯ ನಿಗ್ರಹ ಮತ್ತು ಸರಳತೆ ಸಾಧು-ಸಂತರ ಸಹಜ ಗುಣವಾಗಿದ್ದು ಭಕ್ತರು ಮನ, ವಚನ, ಕಾಯದಿಂದ ಧರ್ಮೋಪದೇಶದ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಸುಶ್ರೇಯಾ ಮಾತಾಜಿ ಮಾತನಾಡಿ, ಕಲಶ ಮಂಗಳದ ಪತ್ರೀಕವಾಗಿದ್ದು ಕಲಶ ಸ್ಥಾಪನೆಯಿಂದ ಸಾನ್ನಿಧ್ಯ ವೃದ್ಧಿಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಗೃಹಸ್ಥರು ಸತತ ಸಾಧು-ಸಂತರ ಹಿತೋಪದೇಶ ಪಡೆದು ಆತ್ಮಕಲ್ಯಾಣ ಮಾಡಿಕೊಳ್ಳಬೇಕು ಎಂದು ಹೇಳಿದರು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್ ಮಾತನಾಡಿ, ಅಹಿಂಸಾ ಧರ್ಮ ಶ್ರೇಷ್ಠ ಧರ್ಮವಾಗಿದ್ದು ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣವನ್ನು ಮಾಡಬೇಕು. ಪರೋಪಕಾರ ನಿಸ್ವಾರ್ಥ ಸೇವೆ, ಆದರ್ಶ ನಾಯಕತ್ವ, ದಯೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳು ಜೈನರ ಸಹಜ ಸ್ವಭಾವವಾಗಿದ್ದು ಅವರಿಗೆ ಸಮಾಜದಲ್ಲಿ ವಿಶೇಷ ಸ್ಥಾನ-ಮಾನ ಹಾಗೂ ಗೌರವವಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಆದರ್ಶ ವ್ಯಕ್ತಿತ್ವದಿಂದ ಸರ್ವಧರ್ಮಿಯರ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಧಾನಿಯವರೆ ಅವರ ಬಗ್ಯೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಭಾರತೀಯ ಜೈನ್ ಮಿಲನ್ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಮತ್ತು ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಿದರು.
ಶಿಶುಪಾಲ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಚಾರ್ತುರ್ಮಾಸದ ಮಹತ್ವ ವಿವರಿಸಿದರು. ಚಾರ್ತುಮಾಸ ಸಮಿತಿಯ ಗೌರವ ಸಲಹೆಗಾರ ಎನ್. ಪ್ರೇಮ್ ಕುಮಾರ್ ಹೊಸ್ಮಾರು, ಅರುಣಾ ಪ್ರಕಾಶ್, ಅಜಿತ್ ಕುಮಾರ್ ಜೈನ್, ಅಶೋಕ್ ಕುಮಾರ್ ವರಿಮಾರು ಜಿನೇಂದ್ರ ಜೈನ್, ಹರ್ಷೇಂದ್ರ ಜೈನ್ ಉಪಸ್ಥಿತರಿದ್ದರು.
ಪವಿತ್ರಾ ರಾಜವರ್ಮ ಜೈನ್ ಸ್ವಾಗತಿಸಿದರು. ಶಿಶುಪಾಲ ಜೈನ್ ಧನ್ಯವಾದವಿತ್ತರು. ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment