ಸಂಘ/ ಬಿಜೆಪಿ ತಿಕ್ಕಾಟದಲ್ಲಿ ಆಡಳಿತ ಮೊಕ್ತೇಸರ ಆಯ್ಕೆ ಜಟಿಲ
ಜಿತೇಂದ್ರ ಕುಂದೇಶ್ವರ
ಮಂಗಳೂರು: ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿಗ ಪ್ರತಿಷ್ಠಿತ ಉದ್ಯಮಿ ಎ.ಜೆ. ಶೆಟ್ಟರು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಬಿಜೆಪಿ ಹೈಕಮಾಂಡ್ ಎ.ಜೆ. ಶೆಟ್ಟರನ್ನು ಅಂತಿಮ ಗೊಳಿಸಿದೆ. ಆದರೆ ಅಧ್ಯಕ್ಷ ಅಭ್ಯರ್ಥಿಯಾಗಿ ಸಂಘದ ಕಡೆಯಿಂದ ಜೋಗಿ ಸಮುದಾಯದ ಎಚ್.ಕೆ.ಪುರುಷೋತ್ತಮ ಅವರಿದ್ದರೂ ಬಿಜೆಪಿ ಹೈ ಕಮಾಂಡ್ ಎದುರು ಸಂಘದ ಮುಖಂಡರು ಧ್ವನಿ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಪ್ರಭಾವಿ ನಾಯಕರಾಗಿದ್ದ ಯಶಸ್ವಿ ಉದ್ಯಮಿ ಎ.ಜೆ. ಶೆಟ್ಟರು 30 ವರ್ಷಗಳಿಂದಲೂ ಕದ್ರಿ ಕ್ಷೇತ್ರದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ವಯಸ್ಸೂ 77 ದಾಟಿದೆ. ಹೀಗಾಗಿ ಬಿಜೆಪಿ ಸರಕಾರ ಬಂದ ಬಳಿಕವಾದರೂ ಈ ಗೌರವದ ಹುದ್ದೆ ಸಂಘ ಪರಿವಾರದವರಿಗೆ ಸಿಗಬಹುದು ಎನ್ನುವ ಅಭಿಲಾಶೆ ಕಾರ್ಯಕರ್ತ/ ಮುಖಂಡರಿಗೆ ಇತ್ತು.
ಜಗ್ಗಾಟಕ್ಕೆ ವರ್ಷ ...
ಸಂಘ ಮತ್ತು ಬಿಜೆಪಿ ತಿಕ್ಕಾಟದಿಂದಾಗಿ ವ್ಯವಸ್ಥಾಪನಾ ಸಮಿತಿ ಆಯ್ಕೆ ಒಂದು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಅಂತೂ ಇಂತೂ ಈಗ ಸದಸ್ಯರ ಆಯ್ಕೆ ನಡೆದಿದೆ.
ಜು.14ರಂದು ಸಮಿತಿಯ ಮೊದಲ ಸಭೆಯೂ ನಡೆಯಲಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರ ಆಯ್ಕೆಯ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಎ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆಯನ್ನು ರಾಜ್ಯ ಧಾರ್ಮಿಕ ಪರಿಷತ್ ಆಯ್ಕೆ ಮಾಡಬೇಕು.
ಬಿ ಮತ್ತು ಸಿ ಗ್ರೇಡ್ ದೇವಾಲಯಗಳ ಸಮಿತಿ ಆಯ್ಕೆ ಜಿಲ್ಲಾ ಧಾರ್ಮಿಕ ಪರಿಷತ್‌ಗೆ. ಇದು ನಿಯಮ. ವಾಸ್ತವವಾಗಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ ಆ ಪಕ್ಷದ ಮುಖಂಡರ ಅಪೇಕ್ಷೆಯಂತೆ ಸಮಿತಿ ಮತ್ತು ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಸ್ಥಳೀಯ ಶಾಸಕ ಅಥವಾ ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಸಂಘದ ಹಿರಿಯರು ತೀರ್ಮಾನ ಮಾಡಿದಂತೆ ಅರ್ಜಿಗಳನ್ನು ಪರಿಶೀಲಿಸಿ ಧಾರ್ಮಿಕ ಪರಿಷತ್ ಆಯ್ಕೆ ಪ್ರಕ್ರಿಯೆಗೆ ಮೊಹರು ಒತ್ತುತ್ತದೆ.
ಈ ಬಾರಿ ಆರ್‌ಎಸ್ಸೆಸ್ ಈ ಹೊಣೆಯನ್ನು ವಿಶ್ವಹಿಂದು ಪರಿಷತ್‌ಗೆ ವಹಿಸಿದೆ. ಕದ್ರಿ ವಿಚಾರದಲ್ಲಿ ಬಿಜೆಪಿ ಹೈ ಕಮಾಂಡ್ ಎ.ಜೆ. ಶೆಟ್ಟರ ಪರ ಬ್ಯಾಟಿಂಗ್ ಮಾಡಿರುವುದೇ ತಿಕ್ಕಾಟಕ್ಕೆ ಕಾರಣ.
ಮಂತ್ರ ಮುಗ್ಧ ಕೋಟ!
ಧಾರ್ಮಿಕ ದತ್ತಿ ಇಲಾಖೆ ಸಚಿವರು ಧಾರ್ಮಿಕ ಪರಿಷತ್‌ಗೆ ಅಧ್ಯಕ್ಷರು. ಕೋಟ ಶ್ರೀನಿವಾಸ ಪೂಜಾರಿ ಅವರು ಮಾತ್ರ ಇದ್ಯಾವುದಕ್ಕೂ ತಲೆ ಹಾಕದೆ ಬಿಜೆಪಿ ಮತ್ತು ಸಂಘ ಪರಿವಾರದರಿಗೆ ಸಂಪೂರ್ಣ ಹೊಣೆ ಕೊಟ್ಟುಬಿಟ್ಟಿದ್ದಾರೆ. ಧಾರ್ಮಿಕ ಪರಿಷತ್‌ಗೆ ಕೇವಲ ಮೊಹರು ಒತ್ತುವ ಕೆಲಸ ಮಾತ್ರ ಬಾಕಿ ಉಳಿಸಲಾಗಿದೆ.
ಬಂಟರಿಗೆ ಕೋಟಾ, ಬಿಲ್ಲವರಿಗೆ ಖೋತಾ!:
ಕದ್ರಿ ಕ್ಷೇತ್ರದಲ್ಲಿ ಜೋಗಿ, ಮೋಗವೀರ ಸಮುದಾಯದವರಿಗೆ ಕ್ಷೇತ್ರದ ಕಟ್ಟುಪಾಡಿನ ನೆಲೆಯಲ್ಲಿ ವಿಶೇಷ ಆದ್ಯತೆ, ಬಿಲ್ಲವ ಮತ್ತು ಬಂಟರಿಗೆ ಪ್ರಬಲ ಸಮುದಾಯದ ಹಿನ್ನೆಲೆಯಲ್ಲಿ ಮನ್ನಣೆ, ಧಾರ್ಮಿಕ ದತ್ತಿ ಅಧಿನಿಯಮದಂತೆ ಅರ್ಚಕರಿಗೆ ಒಂದು ಸ್ಥಾನ, ಸರಕಾರದ ನಿಯಮದಂತೆ ಪರಿಶಿಷ್ಟಜಾತಿ/ಪಂಗದವರಿಗೆ, ಮಹಿಳೆಯರಿಗೆ ಒಂದು ಸ್ಥಾನ ಮೀಸಲು. ಆದರೆ ಕದ್ರಿ ಕ್ಷೇತ್ರದಲ್ಲಿ ಬಂಟರು ಮತ್ತು ಜೋಗಿ ಸಮುದಾಯಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದ್ದು, ಬಿಲ್ಲವರಿಗೆ ಒಂದೇ ಒಂದು ಸ್ಥಾನ ಸಿಕ್ಕಿಲ್ಲ. ಸುವರ್ಣ ಎಂಬ ಸರ್‌ನೇಮ್ ಬಿಲ್ಲವರದಾಗಿದ್ದು, ಬಳಿಕ ಅವರು ಗಾಣಿಗ ಸಮುದಾಯದವರು ಎಂದು ತಿಳಿದು ಬಂತು ಎಂಬುದು ಬಿಜೆಪಿಯವರ ಸಮಜಾಯಿಶಿ.
ಆಸ್ತಿಕ ಬ್ರಾಹ್ಮಣರಿಗೆ ನಾಸ್ತಿ
ಕದ್ರಿಯಲ್ಲಿ ಬ್ರಾಹ್ಮಣ ಸಮುದಾಯದವರ ಅರ್ಜಿಗಳನ್ನೂ ಬ್ರಾಹ್ಮಣ ಎಂಬ ಒಂದೇ ಕಾರಣಕ್ಕೆ ತಳ್ಳಿ ಹಾಕಲಾಗಿದೆ. ಎಲ್ಲ ದೇವಸ್ಥಾನಗಳಲ್ಲಿಯೂ ಬ್ರಾಹ್ಮಣರೇ ಅರ್ಚಕರು ಇರುವುದಿಲ್ಲ. ಹೀಗಾಗಿ ವ್ಯವಸ್ಥಾಪನಾ ಸಮಿತಿಯಲ್ಲಿ ಬ್ರಾಹ್ಮಣರಿಗೂ ಅವಕಾಶ ನೀಡಬೇಕು ಎಂದು ಕದ್ರಿ ರಾಮ ಭಟ್ ವಿಶ್ಲೇಷಿಸುತ್ತಾರೆ.
ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ನಡೆದಿದ್ದು, ಅಧ್ಯಕ್ಷರು ಯಾರಾಗಬೇಕು ಎನ್ನುವುದು ಇನ್ನೂ ಅಂತಿಮವಾಗಿಲ್ಲ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರಿ .
Feedback: 9945666324
Key words: Kadri Manjunatha Temple, Temple committe, A.J Shetty, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಆಡಳಿತ ಮೊಕ್ತೇಸರರು, ಮಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment