ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿತ್ರ ಕಲೆಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಕು.ಸುನೀತ ಪಾಣಾಜೆ

ಚಿತ್ರ ಕಲೆಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಕು.ಸುನೀತ ಪಾಣಾಜೆ

 



ಜೀವನ ಮೌಲ್ಯ...ಜೀವನ ಕೌಶಲ್ಯ ನಿಜದ ನೇರಕೆ ನಡೆವ...

 ನಿರ್ಧಾರ ಇರುವಲ್ಲಿ ಸದಾ ಗೆಲುವು ಇರುತ್ತದೆ...... ಆನಂದವಿರುತ್ತದೆ ಎಂಬ ಮಾತಿನಂತೆ ಯುವಕ-ಯುವತಿಯರು ನಮ್ಮ ದೇಶದ ಶಕ್ತಿಯುತ ಸಂಪನ್ಮೂಲರು.ಅಪಾರ ಪ್ರತಿಭೆಗಳ ಗಣಿ ಅವರು.ಅವರ ಕಲ್ಪನೆಗಳಿಗೆ ಸುಂದರ ರೂಪ ಕೊಡುವ ಕೆಲಸ ಕಾಲಕಾಲಕ್ಕೆ ಆಗ ಬೇಕಾದ ಅಗತ್ಯವಿದೆ.ಇದರಿಂದ ಮನೋಲ್ಲಾಸಗೊಂಡು ಸಾಮಾಜಿಕ ಆರೋಗ್ಯ ಸಾಕಾರಗೊಳ್ಳುವುದು.ಕೇವಲ ಶಿಕ್ಷಣ ಪದವಿಗಳು ಮಾತ್ರ ಮಾನ ದಂಡವಲ್ಲ.ಸೃಜನ ಶೀಲತೆ ಕಲೆ-ಸಾಹಿತ್ಯ ಸಮಾಜ ಸೇವಾ ಮನೋಭಾವಗಳೂ ಇಂದಿನ  ಅಗತ್ಯಗಳಾಗಿವೆ.

           ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿನಾಡು ಪ್ರದೇಶ  ಪಾಣಾಜೆ-ಆರ್ಲಪದವು ಅನೇಕ ಪ್ರತಿಭೆ ಸಾಧಕರ ಆಡೊಂಬೊಲ .ಪಾಣಾಜೆ ಭರಣ್ಯದ ಶ್ರೀ ಆನಂದ ಮತ್ತು ಶ್ರೀಮತಿ ಕುಸುಮ ದಂಪತಿ ಇವರ ಪುತ್ರಿ, ಕು.ಸುನೀತ ಪಾಣಾಜೆ ಇವರು ಸಾಧನೆಯ ಪಥದಲ್ಲಿ ಸಾಗುತ್ತಿರುವ ಯುವ   ಚಿತ್ರಕಲಾ  ಪ್ರತಿಭೆ.



ಬೆಟ್ಟಂಪಾಡಿ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಅಂತಿಮ ಸಮಾಜ ಕಾರ್ಯ ವಿಭಾಗ- BSW ವಿದ್ಯಾರ್ಥಿನಿಯಾಗಿರುವ ಕು.ಸುನೀತಾರ ಪ್ರಾಥಮಿಕ ವಿದ್ಯಾಭ್ಯಾಸ ದಕ ಜಿಲ್ಲಾ  ಪಂಚಾಯತ್ ಹಿರಿಯಪ್ರಾಥಮಿಕ ಶಾಲೆ ಸೂರಂಬೈಲು ಹಾಗೂ ಪ್ರೌಢ ಶಿಕ್ಷಣ ಪಾಣಾಜೆ  ಸುಬೋಧ ಪ್ರೌಢಶಾಲೆಯಲ್ಲಿ ನಡೆಯಿತು.ಮುಂದೆ ಪದವಿ ಪೂರ್ವ ಶಿಕ್ಷಣವನ್ನು ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರಿಗೆ ಎಳವೆಯಿಂದಲೇ ಕಲಿಕೆಯೊಂದಿಗೆ ಚಿತ್ರಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ.
           ತನ್ನ ಚಿತ್ರಕಲೆಗೆ ಬೆನ್ನೆಲುಬಾಗಿ ನಿಂತ ಅಣ್ಣ ಸುನಿಲ್ ನನ್ನ ಮೊದಲ ಚಿತ್ರಕಲಾಗುರು ಎಂದು ಅಭಿಮಾನದಿಂದ ಹೇಳುವ ಕು.ಸುನೀತ  ಪಾಣಾಜೆ ಸುಬೋಧ ಪ್ರೌಢಶಾಲಾ ಶಿಕ್ಷಕಿ ಶಾರದಾ ಅವರಿಂದ ಚಿತ್ರ ಕಲಾರಚನೆಯ ಒಳಹೊರಗನ್ನು ವರ್ಣ ಸಂಯೋಜನೆಯನ್ನು ಕರಗತ ಮಾಡಿಕೊಂಡರು.




        2014ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿಯವರು ನಡೆಸಿದ ಚಿತ್ರಕಲಾ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದರು.
         2015ರಲ್ಲಿ ಮಂಡ್ಯದ ಕರ್ನಾಟಕ ಶ್ರೀ ಪ್ರಗತಿಪರ ಸೇವಾಸಂಸ್ಥೆ ಇವರು ನಡೆಸಿದ ಹನ್ನೊಂದನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುತ್ತೂರು ತಾಲೂಕು ಮಟ್ಟದಲ್ಲಿ ಪ್ರಥಮ Rank ಗಳಿಸಿದ ಹಿರಿಮೆಗೆ ಪಾತ್ರರಾದರು ಇವರೇ ನಡೆಸಿದ ಹನ್ನೆರಡನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲೂ ಭಾಗವಹಿಸಿದರು.     
          ಕು.ಸುನೀತ ಪಾಣಾಜೆಯವರ ಚಿತ್ರಕಲಾ ಪಯಣ 2015ರಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಜಿ.ಪಾವಂಜೆ ಚಿತ್ರಕಲಾಪೀಠ ಇವರು ನಡೆಸಿದ ತಾಲೂಕು ಮಟ್ಟದ ಚಿತ್ರಕಲಾಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸಾಗಿತು.ಮುಂದೆ  ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜು ನಡೆಸಿದ ಡ್ರೀಂ-2015ರಲ್ಲೂ ಭಾಗವಹಿಸಿದ ಹಿರಿಮೆ ಈ ಚಿತ್ರಕಲಾಪ್ರತಿಭೆಯದು.
          ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡ ಪ್ರತಿಭಾವಂತೆ.

 ವ್ಯಕ್ತಿಗೆ ಪ್ರೋತ್ಸಾಹ ಹಾಗೂ ಪ್ರಶಂಸೆ  ದೊರಕಿದಾಗ ಸಾಧನೆಯ ಪಥ ಸುಗಮವಾಗುತ್ತದೆ. ಇದಕ್ಕೊಂದು ನಿದರ್ಶನ ನಮ್ಮ ನಡುವಿನ ಗಡಿನಾಡಿನ ಯುವ ಕಲಾವಿದೆ ಕು.ಸುನೀತ ಪಾಣಾಜೆ.. 

ಕಲಿಕೆಯೊಂದಿಗೆ ಕಲಾ ಹವ್ಯಾಸವನ್ನೂ ರೂಢಿಸಿ ಕೊಂಡಿರುವುದು ಯುವಪ್ರತಿಭೆಗಳಿಗೂ... ಸ್ಫೂರ್ತಿ‌. ತನ್ನ ಕಲೆಗೆ ಸದಾ ಬೆಂಬಲ ನೀಡುವ ಹೆತ್ತವರನ್ನು- ಗುರುಹಿರಿಯರನ್ನು ಸ್ನೇಹಿತರನ್ನು ಸದಾ ನೆನಪಿಸುವ ಚಿತ್ರಕಲಾ ಯುವ ಪ್ರತಿಭೆ ಕು.ಸುನೀತ ಪಾಣಾಜೆ  ಇವರ ಕಲಾ ಪ್ರತಿಭೆ ಬೆಳಗಲಿ... ಶೈಕ್ಷಣಿಕ ಸಾಧನೆಯು ಉನ್ನತ ಮಟ್ಟದಲ್ಲಿ ಸಾಗಲೆಂಬುದೇ ನಮ್ಮೆಲ್ಲರ ಹಾರೈಕೆ.



*✍️ನಾರಾಯಣ ರೈ ಕುಕ್ಕುವಳ್ಳಿ.*

0 Comments

Post a Comment

Post a Comment (0)

Previous Post Next Post